Saturday, January 18, 2025
Homeಉಡುಪಿರಿಷಿಕಾ ಕುಂದೇಶ್ವರಗೆ ಡ್ರಾಮಾ ಜೂನಿಯರ್ಸ್‌ ಪಟ್ಟ‌: ವಿಧಾನಸಭಾಧ್ಯಕ್ಷರು,  ವಿಧಾನಪರಿಷತ್ ಪ್ರತಿಪಕ್ಷ ನಾಯಕರು, ಶಾಸಕರು, ಸಂಸದರಿಂದ ಅಭಿನಂದನೆ

ರಿಷಿಕಾ ಕುಂದೇಶ್ವರಗೆ ಡ್ರಾಮಾ ಜೂನಿಯರ್ಸ್‌ ಪಟ್ಟ‌: ವಿಧಾನಸಭಾಧ್ಯಕ್ಷರು,  ವಿಧಾನಪರಿಷತ್ ಪ್ರತಿಪಕ್ಷ ನಾಯಕರು, ಶಾಸಕರು, ಸಂಸದರಿಂದ ಅಭಿನಂದನೆ

ಮಂಗಳೂರು: ಜೀ ಕನ್ನಡದ ಡ್ರಾಮಾ ಜೂನಿಯರ್ಸ್‌ ಸೀಸನ್‌ 5ರ ವಿನ್ನರ್‌ ಆಗಿ ಮಂಗಳೂರಿನ ರಿಷಿಕಾ ಕುಂದೇಶ್ವರ  ಟ್ರೋಫಿ ಗೆದ್ದುಕೊಂಡಿದ್ದು ವಿಧಾನಸಭಾಧ್ಯಕ್ಷರು, ವಿಧಾನಪರಿಷತ್ ಪ್ರತಿಪಕ್ಷ ನಾಯಕರು,

 ಶಾಸಕರು, ಸಂಸದರು, ಕಲಾವಿದರು ಜಾಲತಾಣದಲ್ಲಿ ಪೋಸ್ಟ್ ಹಾಕಿ ಅಭಿನಂದಿಸಿದ್ದಾರೆ.

ಸ್ಪೀಕರ್ ಯು.ಟಿ.ಖಾದರ್, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ವಿ.ಸುನಿಲ್ ಕುಮಾರ್, ವೇದವ್ಯಾಸ ಕಾಮತ್, ಹರೀಶ್ ಪೂಂಜ, ಮಾಜಿ ಶಾಸಕ ರಘುಪತಿ ಭಟ್ ಮತ್ತು ಸಿನಿ, ರಂಗಭೂಮಿ ಕಲಾವಿದರು ಜಾಲತಾಣದಲ್ಲಿ ಅಭಿನಂದಿಸಿ ಪೋಸ್ಟ್ ಗಳನ್ನು ಹಾಕಿದ್ದಾರೆ.

ಪೌರಾಣಿಕ, ವ್ಯಕ್ತಿಚಿತ್ರ, ಐತಿಹಾಸಿಕ, ಜನಪದೀಯ ಶಾಸ್ತ್ರೀಯ ಮತ್ತು ಕಾಮಿಡಿ ವಿಭಾಗದಲ್ಲಿ ವಾಕ್ಪಟುತ್ವ ಮತ್ತು ಭಾವಾಭಿನಯದ ಮೂಲಕ ತೀರ್ಪುಗಾರರ ಮತ್ತು ಕನ್ನಡಿಗರ ಮೆಚ್ಚುಗೆ ಗಳಿಸಿ ಸೀಸನ್‌ನಲ್ಲಿ ಅತಿ ಹೆಚ್ಚು ಅವಾರ್ಡ್‌ಗಳೊಂದಿಗೆ ರಿಷಿಕಾ  ಫೈನಲ್‌ಗೆ ಲಗ್ಗೆ ಹಾಕಿದ್ದರು.  

ರಿಷಿಕಾ ಹಿರಿಯ ಪತ್ರಕರ್ತ ಜಿತೇಂದ್ರ ಕುಂದೇಶ್ವರ ಮತ್ತು ಸಂಧ್ಯಾ ದಂಪತಿಯ ಪುತ್ರಿ.  ಮೂಲತಃ ಕಾರ್ಕಳ ಕುಂದೇಶ್ವರದ ರಿಷಿಕಾ, ಮಂಗಳೂರು ಅಶೋಕನಗರ ಎಸ್‌ಡಿಎಂ ಸ್ಕೂಲ್‌ ವಿದ್ಯಾರ್ಥಿನಿ. ಬಾಲಯಕ್ಷಕೂಟ, ಯಕ್ಷಮಾಧ್ಯಮ ತಂಡದ ಸದಸ್ಯೆ.

ತಂದೆ ಜತೆ ಯಕ್ಷಗಾನ, ಯಕ್ಷರೂಪಕ, ನಾಟಕಗಳಲ್ಲಿ ಅಭಿನಯಿಸುವ ರಿಷಿಕಾ, ಕೃಷ್ಣರಾಜ ನಂದಳಿಕೆ ಅವರಿಂದ ಕರ್ನಾಟಿಕ್‌ ಸಂಗೀತ, ಎಲ್ಲೂರು ರಾಮಚಂದ್ರ ಭಟ್‌ ಅವರಲ್ಲಿ ತೆಂಕುತಿಟ್ಟು ಯಕ್ಷಗಾನ ಅಭ್ಯಾಸ ಮಾಡುತ್ತಿದ್ದಾಳೆ.

ಹಾಡು ನೀ ಹಾಡು ಗಾಯನ ರಿಯಾಲಿಟಿ ಶೋದಲ್ಲಿ ಸೆಕೆಂಡ್‌ ರನ್ನರಪ್‌ ಪ್ರಶಸ್ತಿ ಗೆದ್ದಿರುವ ರಿಷಿಕಾ, ವಿಶ್ವಕನ್ನಡಿಗ ಮಕ್ಕಳಿಗೆ ನಡೆದ ಕಥೆ ಹೇಳುವ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಪ್ರತಿಭಾ ಕಾರಂಜಿಯ ಭಗವದ್ಗೀತೆ ಕಂಠಪಾಠ ವಿಭಾಗದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಳು.

ಡ್ರಾಮ ಪಯಣ: ಮೆಗಾಅಡಿಶನ್‌ನಲ್ಲಿ ದಾಕ್ಷಾಯಿಣಿ ಮೂಲಕ ಮೂವರು ತೀರ್ಪುಗಾರರ ಒಕ್ಕೊರಲ ಮೆಚ್ಚುಗೆ ಗಳಿಸಿ ೨೪ ಮಂದಿ ಸ್ಪರ್ದಿಗಳಲ್ಲಿ ಒಬ್ಬಳಾಗಿ ಆಯ್ಕೆಯಾಗಿದ್ದಳು. 

ದೇವರ ಪಾತ್ರಗಳಲ್ಲಿ ಸಿದ್ಧಿ ತೋರಿದ್ದ ರಿಷಿಕಾ ವಚನಕಾರ ಅಲ್ಲಮಪ್ರಭು ನಾಟಕದಲ್ಲಿ ಭಕ್ತಿ ಭಾವನಾತ್ಮಕ ವಚನಗಳನ್ನು ಹೇಳುತ್ತಾ ಭಕ್ತಿಯ ಪರಾಕಾಷ್ಠೆ ಪ್ರದರ್ಶಿಸಿದ್ದಳು. ತೀರ್ಪುಗಾರರು ಸ್ಟ್ಯಾಂಡಿಂಗ್‌ ಒವೇಶನ್‌ ನೀಡಿ, ಎಲ್ಲರೂ ವೇದಿಕೆಗೆ ಬಂದು ವಚನಗಳನ್ನು ಹಾಡಿದ್ದರು.

ದ.ರಾ. ಬೇಂದ್ರೆ ನಾಟಕದಲ್ಲಿ ಪುಟ್ಟ ಮಗುವಿನ ಸಾವಿನ ನೋವೇ ಹಾಡಾಗಿ ಹೊರಬರುವ ಹೃದಯ ಕಲಕುವ ಭಾವಾಭಿನಯ, ದಂಡನೆಗೆ ಒಳಗಾಗುವ ಏಸು ಕ್ರಿಸ್ತನ ಪಾತ್ರ, ಬೋಧನೆಗಳು, ಶಿವನ ಉಗ್ರರೂಪ, ದಾಕ್ಷಾಯಿಣಿಯ ಆತ್ಮಾಹುತಿ, ಶಿವಸತಿ ಪಾರ್ವತಿಯ ಪ್ರೇಮ ನಿವೇದನೆ, ಪೌಂಡ್ರಕ, ಪರಶುರಾಮನ ಉಗ್ರರೂಪ, ಭಕ್ತ ಆಂಜನೇಯನ ಭಕ್ತಿ ಪರವಶತೆಯ ಅಭಿನಯವು ತೀರ್ಪುಗಾರರು ಮತ್ತು ವೀಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು.

ಯಕ್ಷಗಾನ ಮತ್ತು ಶಾಸ್ತ್ರೀಯ ಸಂಗೀತ ವಿದ್ಯಾರ್ಥಿ ರಿಷಿಕಾ, ಕಂಚಿನ ಕಂಠದ ಮೂಲಕ ಶೋ ಉದ್ದಕ್ಕೂ ಹರಿಕಥೆ, ಸಾಂಪ್ರದಾಯಿಕ ಯಕ್ಷಗಾನದ ಭೀಮ, ಹಗಲುವೇಷದ ರಾಮ, ದೊಡ್ಡಾಟದ ಜಮದಗ್ನಿ ಹೀಗೆ ಜನಪದ, ಶಾಸ್ತ್ರೀಯ ವಿಭಾಗದಲ್ಲಿ ಸೈ ಎನಿಸಿಕೊಂಡಿದ್ದಳು.  

ಜಲಿಯನ್‌ ವಾಲಾಭಾಗ್‌ನಲ್ಲಿ ದೇಶ ಭಕ್ತರನ್ನು ಕೊಂದ ಕ್ರೂರಿ ಜನರಲ್‌ ಡಯರ್‌, ಹೊಯ್ಸಳ ವಂಶ ಸ್ಥಾಪಕ ಸಳದ ಕೆಚ್ಚು, ದೇಶಭಕ್ತ ಹುತಾತ್ಮ ಕ್ಯಾ. ಪ್ರಾಂಜಲ್, ದಾಸ ಶ್ರೇಷ್ಠ ಪುರಂದರ ದಾಸ, ಯಕ್ಷಪ್ರಶ್ನೆಗೆ ಉತ್ತರಿಸುವ ಧರ್ಮರಾಯ ಪಾತ್ರಗಳು ಸದಾ ಕಾಲ ನೆನಪಲ್ಲಿ ಉಳಿಯುವಂತೆ ಮಾಡಿದೆ. ಬಾಲ್ಡಿ ಇನ್‌ಸ್ಪೆಕ್ಟರ್‌, ಝೂ ಲೇಡಿ ಆಫೀಸರ್‌, ಬೆಗ್ಗರ್‌ ಪೇರೆಂಂಟ್ಸ್‌, ಸ್ವಯಂವರ ಕಾಮಿಡಿ ಡ್ರಾಮಗಳಲ್ಲಿ  ನಗೆಯ ಹೊನಲು ಹರಿಸಿ, ಜನಮನ ಮೆಚ್ಚುಗೆ ಪಡೆದಿದ್ದಳು.

RELATED ARTICLES
- Advertisment -
Google search engine

Most Popular