ಜೈಪುರ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಸ್ಥಾನ ಇಳಿಕೆಯಾದ ಬಗ್ಗೆ ಆರೆಸ್ಸೆಸ್ ಮುಖಂಡ ಇಂದ್ರೇಶ್ ಕುಮಾರ್ ತೀವ್ರ ಟೀಕೆಯೊಂದನ್ನು ಮಾಡಿದ್ದಾರೆ. ಅಹಂಕಾರಿ ಪಕ್ಷವನ್ನು 241ಕ್ಕೆ ತಡೆಯಲಾಯಿತು ಎಂದು ಅವರು ಬಿಜೆಪಿಯನ್ನು ಟೀಕಿಸಿದ್ದಾರೆ. ಜೈಪುರದ ಕನೋಟದಲ್ಲಿ ರಾಮರಥ ಅಯೋಧ್ಯಾ ಯಾತ್ರಾ ದರ್ಶನ್ ಪೂಜಾ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಕ್ತಿಯನ್ನು ಮೆರೆದರೂ ಅಹಂಕಾರಿಯಾದ ಪಕ್ಷವನ್ನು 241ಕ್ಕೆ ತಡೆಯಲಾಯಿತು. ಆದರೆ ಅದನ್ನು ಅತ್ಯಂತ ದೊಡ್ಡ ಪಕ್ಷವನ್ನಾಗಿಸಲಾಯಿತು ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ಅವರು ವಾಗ್ದಾಳಿ ನಡೆಸಿದ್ದಾರೆ.
ಇನ್ನೊಂದೆಡೆ ಇಂಡಿಯಾ ಮೈತ್ರಿಕೂಟವನ್ನೂ ಟೀಕಿಸಿದ ಅವರು, ರಾಮನ ಮೇಲೆ ಭಕ್ತಿ ಇಲ್ಲದವರನ್ನು ಜೊತೆಯಾಗಿ 234ಕ್ಕೆ ನಿಲ್ಲಿಸಲಾಯಿತು ಎಂದು ಹೇಳಿದ್ದಾರೆ. ಪ್ರಜಾಪ್ರಭುತ್ವದಲ್ಲಿ ರಾಮ ರಾಜ್ಯದ ವಿಧಾನವನ್ನು ನೋಡಿ. ಯಾರು ರಾಮನ ಮೇಲೆ ಭಕ್ತಿ ತೋರಿಸಿ ನಂತರ ಅಹಂಕಾರಿಯಾದರು ಆ ಪಕ್ಷ ದೊಡ್ಡ ಪಕ್ಷವಾಯಿತು. ಆದರೆ ನೀಡಬೇಕಾಗಿದ್ದ ಮತ ಮತ್ತು ಶಕ್ತಿಯನ್ನು ಅವರ ಅಹಂಕಾರದ ಕಾರಣ ದೇವರು ತಡೆದರು ಎಂದು ಅವರು ಹೇಳಿದರು.