Thursday, July 25, 2024
Homeರಾಜ್ಯವಾಹನಗಳಿಗೆ ಹೆಚ್ಚು ಪ್ರಖರ ಬೆಳಕು ಹೊರಸೂಸುವ ಎಲ್‌ಇಡಿ ದೀಪ ಅಳವಡಿಸದಂತೆ ಎಚ್ಚರಿಕೆ

ವಾಹನಗಳಿಗೆ ಹೆಚ್ಚು ಪ್ರಖರ ಬೆಳಕು ಹೊರಸೂಸುವ ಎಲ್‌ಇಡಿ ದೀಪ ಅಳವಡಿಸದಂತೆ ಎಚ್ಚರಿಕೆ

ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆ
ಬೆಂಗಳೂರು: ಹೆಚ್ಚು ಪ್ರಖರ ಬೆಳಕು ಹೊರ ಸೂಸುವ ಎಲ್‌ಇಡಿ ದೀಪಗಳನ್ನು ಹಾಕುವ ವಾಹನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಂಚಾರ ಮತ್ತು ರಸ್ತೆ ಸುರಕ್ಷತೆಯ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ ಅಲೋಕ್‌ ಕುಮಾರ್‌ ನಿರ್ದೇಶಿಸಿದ್ದಾರೆ. ಎಲ್ಲಾ ವಾಹನಗಳಿಗೆ ಸಿಎಂವಿ ಕಾಯ್ದೆಯಲ್ಲಿ ನಮೂದಿಸಿರುವ ಮಾನದಂಡದಂತೆ ಎಲ್‌ಇಡಿ ದೀಪಗಳನ್ನು ಅಳವಡಿಸುವಂತೆ ಸೂಚಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹಲವಾರು ವಾಹನಗಳಲ್ಲಿ ಹೆಚ್ಚು ಬೆಳಕು ಹೊರಹಾಕುವ ಎಲ್‌ಇಡಿ ದೀಪಗಳನ್ನು ಅಳವಡಿಸಲಾಗುತ್ತಿದ್ದು, ಇದರಿಂದ ಎದುರುಮುಖವಾಗಿ ಸಂಚರಿಸುವ ಇತರೆ ವಾಹನ ಸವಾರರಿಗೆ ತೀವ್ರ ತೊಂದರೆಯುಂಟಾಗುತ್ತಿದೆ. ಇದರಿಂದಾಗಿ ಅಪಘಾತಗಳು ಹೆಚ್ಚುತ್ತಿರುವುದು ಕಂಡುಬರುತ್ತಿದೆ. ಈ ಪೈಕಿ ಭಾರೀ ಗಾತ್ರದ ವಾಹನಗಳಾದ ಲಾರಿ, ಬಸ್ಸು, ಟ್ರಕ್‌ ಮುಂತಾದುವುಗಳಲ್ಲಿ ಹೆಚ್ಚು ಪ್ರಖರ ಬೆಳಕು ಹೊರಸೂಸುವ, ಕಣ್ಣು ಕುಕ್ಕುವ ಎಲ್‌ಇಡಿ ದೀಪಗಳನ್ನು ಅಳವಡಿಸುತ್ತಿರುವುದರಿಂದ ಇತರೆ ವಾಹನ ಸವಾರರಿಗೆ ವಾಹನ ಚಲಾಯಿಸಲು ತೊಂದರೆಯಾಗುತ್ತಿದೆ ಎಂದು ಅವರು ತಮ್ಮ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ವಾಹನ ಸವಾರರು ತಮ್ಮ ವಾಹನಗಳಿಗೆ ಕೇಂದ್ರ ಮೋಟಾರು ವಾಹನ ಕಾಯ್ದೆಯಲ್ಲಿ ನಮೂದಿಸಿರುವ ಮಾನದಂಡದಂತೆ ಅಳವಡಿಸಬೇಕಾದ ಹೆಡ್‌ಲೈಟ್‌ಗಳನ್ನೇ ಕಡ್ಡಾಯವಾಗಿ ಅಳವಡಿಸಬೇಕೆಂದು ಅವರು ನಿರ್ದೇಶಿಸಿದ್ದಾರೆ. ಒಂದು ವೇಳೆ ಈ ನಿಯಮ ಉಲ್ಲಂಘಿಸಿದಲ್ಲಿ ಐಎಂವಿ ಕಲಂ 177ರಡಿ ಪ್ರಕರಣ ದಾಖಲಿಸಬಹುದು ಎಂದು ಅವರು ಸೂಚಿಸಿದ್ದಾರೆ. ಈ ರೀತಿ ನಿಯಮ ಉಲ್ಲಂಘಿಸುವವರ ವಿರುದ್ಧ ಜುಲೈ ತಿಂಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ, ಪ್ರಕರಣ ದಾಖಲಿಸಿ ಕ್ರಮ ಕೈಗೊಂಡ ಬಗ್ಗೆ ಪಾಲನಾ ವರದಿ ಸಲ್ಲಿಸುವಂತೆ ಅವರು ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.

RELATED ARTICLES
- Advertisment -
Google search engine

Most Popular