Thursday, July 25, 2024
Homeಮೂಡುಬಿದಿರೆನವ ಮೂಡಬಿದಿರೆಯ ನಿರ್ಮಾಣದಲ್ಲಿ ಎಸ್. ಎನ್. ಮೂಡಬಿದ್ರಿ ಪಾತ್ರ ಮಹತ್ವಪೂರ್ಣ -ಅಭಯಚಂದ್ರ ಜೈನ್

ನವ ಮೂಡಬಿದಿರೆಯ ನಿರ್ಮಾಣದಲ್ಲಿ ಎಸ್. ಎನ್. ಮೂಡಬಿದ್ರಿ ಪಾತ್ರ ಮಹತ್ವಪೂರ್ಣ -ಅಭಯಚಂದ್ರ ಜೈನ್

ಮೂಡಬಿದಿರೆಯ ಗ್ರಾಮೀಣ ಭಾಗದ ಯುವ ಜನತೆಗೆ ಶ್ರೇಷ್ಠ ಶಿಕ್ಷಣ ಲಭಿಸಬೇಕು ಎಂಬುದು ಸಮಾಜ ಸುಧಾರಕ ಎಸ್. ಎನ್. ಮೂಡಬಿದ್ರಿಯವರ ತೀವ್ರ ಹಂಬಲ ಹಾಗೂ ದೂರದೃಷ್ಟಿತ್ವವು ಇಂದು ಮೂಡಬಿದಿರೆಯನ್ನು ಶಿಕ್ಷಣಕಾಶಿಯಾಗಿ ರೂಪಿಸುವಲ್ಲಿ ಮಹತ್ವದ ಪಾತ್ರವಹಿಸಿದೆ. ಅವರ ತ್ಯಾಗ, ಕರ್ತೃತ್ವ ಶಕ್ತಿಯಿಂದ ಇಂದು ಈ ಭಾಗದ ಯುವಜನತೆ ತಾಂತ್ರಿಕ ಶಿಕ್ಷಣವನ್ನು ಪಡೆದು ಗುಣಮಟ್ಟದ ಜೀವನ‌ ನಡೆಸಲು ಸಾಧ್ಯವಾಗಿದೆ. ಇದೀಗ ಅವರ ಸುಪುತ್ರರಾದ ಮನೋಹರ ಮೂಡಬಿದ್ರಿಯವರು ಎಸ್. ಎನ್. ಮೂಡಬಿದ್ರಿ ಪಾಲಿಟೆಕ್ನಿಕ್ ನ ಆಡಳಿತ ಮಂಡಳಿಯ ಸದಸ್ಯರಾಗಿ ಸೇರ್ಪಡೆಗೊಂಡಿರುವುದು ಸಂಸ್ಥೆಗೆ ಮತ್ತಷ್ಟು ಬಲತಂದಿದೆ ಎಂದು ಎಸ್. ಎನ್. ಮೂಡಬಿದ್ರಿ ಪಾಲಿಟೆಕ್ನಿಕ್ ನ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ನುಡಿದರು. ಅವರು ಎಸ್. ಎನ್. ಮೂಡಬಿದ್ರಿ ಪಾಲಿಟೆಕ್ನಿಕ್ ನ ಹೊಸದಾಗಿ ಸೇರ್ಪಡೆಗೊಂಡ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಪ್ರೇರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಂಸ್ಥೆಯ ಪ್ರಾಂಶುಪಾಲರಾದ ಜೆ. ಜೆ. ಪಿಂಟೊ ಅತಿಥಿಗಳನ್ನು ಸ್ವಾಗತಿಸಿ ವಿದ್ಯಾರ್ಥಿ ಪ್ರೇರಣಾ ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರು. ವೇದಿಕೆಯಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷ ಸಂಪತ್ ಡಿ. ಸಾಮ್ರಾಜ್ಯ, ಟ್ರಸ್ಟಿ ಮನೋಹರ ಎಸ್. ಮೂಡಬಿದ್ರಿ, ಶ್ರೀ ಮಹಾವೀರ ಕಾಲೇಜ್ ಟ್ರಸ್ಟಿನ ಕಾರ್ಯದರ್ಶಿ ಡಾ. ರಾಧಾಕೃಷ್ಣ, ಆಡಳಿತ ಮಂಡಳಿಯ ಸದಸ್ಯರಾದ ಪ್ರೇಮಚಂದ್ರ ಶೆಟ್ಟಿ, ಅಜಿತ್ ಕುಮಾರ್ ಹಾಗೂ ಸಂಸ್ಥೆಯ ಎಂಟು ವಿಭಾಗಗಳ ವಿಭಾಗಾಧಿಕಾರಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಂಸ್ಥೆಯಲ್ಲಿ ಏರ್ಪಡಿಸಿದ್ದ ತಾಂತ್ರಿಕ ಮಾದರಿಗಳ ಪ್ರದರ್ಶನ ಸ್ಪರ್ಧೆ ‘ಕೌಶಲ್ಯಂ 2024’ ಇದರಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ‘ ಬೆಸ್ಟ್ ಇನ್ನೊವೇಟಿವ್ ಕ್ಲಬ್ ಆಫ್ ದ ಇಯರ್’ ಪ್ರಶಸ್ತಿಯನ್ನು ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗಕ್ಕೆ ನೀಡಲಾಯಿತು. ಇನ್ನೊವೇಶನ್ ಕ್ಲಬ್ಬಿನ ಸಂಚಾಲಕ ಡಾ. ಎಸ್. ಪಿ. ಗುರುದಾಸ್ ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರು. ಸಿವಿಲ್ ವಿಭಾಗದ ಉಪನ್ಯಾಸಕಿ ಸುಪ್ರಿಯಾ ಧನ್ಯವಾದ ಸಮರ್ಪಿಸಿದರು. ಎಲೆಕ್ಟ್ರಾನಿಕ್ಸ್ ವಿಭಾಗದ ಉಪನ್ಯಾಸಕಿ ಜ್ಯೋತಿ ನಿರೂಪಿಸಿದರು. ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿಗಳಾದ ರಾಮಪ್ರಸಾದ್ ಎಂ, ಗೋಪಾಲಕೃಷ್ಣ ಕೆ ಎಸ್, ಕಾಲೇಜಿನ ಸಿಬ್ಬಂದಿ ವರ್ಗದವರು ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular