ಬೆಳ್ಮಣ್ : ಲಯನ್ಸ್ ಆಂಗ್ಲ ಮಾಧ್ಯಮ ಶಾಲೆ ಸಚ್ಚೇರಿಪೇಟೆ ಇಲ್ಲಿ 69 ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಮುಂಡ್ಕೂರು – ಕಡಂದಲೆ ಲಯನ್ಸ್ ಕ್ಲಬ್ ನ ಮಾಜಿ ಅಧ್ಯಕ್ಷರಾದ ಲ। ಬಾಲಾಜಿ. ಬಿ. ಶೆಟ್ಟಿ ಅವರು ರಾಷ್ಟ್ರಧ್ವಜಾರೋಹಣ ಹಾಗೂ ಯುವ ಸಾಹಿತಿ ಸುಶಾಂತ್ ಕೋಟ್ಯಾನ್ ನಾಡ ಧ್ವಜಾರೋಹಣವನ್ನು ನೆರವೇರಿಸಿದರು.
ತರುವಾಯ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಶಾಲಾ ಸಂಚಾಲಕರಾದ ಲ। ಸತ್ಯಶಂಕರ್ ಶೆಟ್ಟಿ ಅವರು ವಹಿಸಿ, ಮಾತನಾಡಿ ಕನ್ನಡವು ಬದುಕಿನ ಜೀವಾಳವಾಗಿದ್ದು ಕನ್ನಡ ನಾಡಿನ ಕಲೆ, ಸಂಸ್ಕೃತಿ, ಸರ್ವಾಂಗೀಣ ಪ್ರಗತಿಗೆ ಆಧಾರ ಸ್ತಂಭವಾಗಿರುವುದೆಂದು ತಿಳಿಸಿದರು. ಈ ಸಂದರ್ಭದಲ್ಲಿ ಸಾಹಿತ್ಯ ಹಾಗೂ ರಂಗಭೂಮಿಗೆ ಕೊಡುಗೆ ನೀಡಿದ ಬರಹಗಾರ ಹಾಗೂ ಕಲಾವಿದ ಸುಶಾಂತ್ ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಸುಶಾಂತ್ ಕೋಟ್ಯಾನ್ ಅವರು ಕನ್ನಡ ನಮ್ಮ ಅಸ್ಮಿತೆಯಾಗಿದ್ದು ಅದನ್ನು ಉಳಿಸಿ, ಬೆಳೆಸುವಲ್ಲಿ ಸರ್ವರು ಶ್ರಮಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮುಂಡ್ಕೂರು – ಕಡಂದಲೆ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಲ. ಪ್ರಶಾಂತ್ ಶೆಟ್ಟಿ, ಸದಸ್ಯರಾದ ಲ. ಆನಂದ್ ಆಚಾರ್ಯ, ಲ. ಸತೀಶ್ ಪ್ರಭು, ಮುಖ್ಯೋಪಾಧ್ಯಾಯರಾದ ಗೌರವ ಆರ್. ಕೆ ಉಪಸ್ಥಿತರಿದ್ದರು. ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು. ಕುಮಾರಿ ತೃಪ್ತಿ ಸ್ವಾಗತಿಸಿ, ಕುಮಾರಿ ಜಿಯಾ ಡಿಮೆಲ್ಲೊ ಕಾರ್ಯಕ್ರಮ ನಿರ್ವಹಿಸಿದರು. ಕುಮಾರಿ ವೀಕ್ಷಾ& nbsp;ವಂದಿಸಿದರು.