ಗೋವಾದಲ್ಲಿ 18 ವರ್ಷಗಳ ಹಿಂದೆ ಬರ್ಬರವಾಗಿ ಹತ್ಯೆಯಾಗಿದ್ದ ಕೊಡಗಿನ ಬಾಲಕಿ ಸಫಿಯಾ ಅಂತ್ಯ ಸಂಸ್ಕಾರ ಇಸ್ಲಾಂ ಪದ್ಧತಿಯಂತೆ ಇದೀಗ ನೆರವೇರಿದೆ. ಕಾಸರಗೋಡಿನ ಕೆ.ಸಿ.ಹಂಝ ಎಂಬಾತ ಮನೆ ಕೆಲಸಕ್ಕೆಂದು ಬಾಲಕಿಯನ್ನು 2006ರಲ್ಲಿ ಗೋವಾಕ್ಕೆ ಕರೆದೊಯ್ದಿದ್ದ. ಬಳಿಕ ಬಿಸಿ ಗಂಜಿ ಮೈಮೇಲೆ ಬಿದ್ದು ಬಾಲಕಿ ತೀವ್ರವಾಗಿ ಗಾಯಗೊಂಡಿದ್ದಳು. ಬಾಲಕಾರ್ಮಿಕ ಪ್ರಕರಣ ದಾಖಲಾಗುವ ಹೆದರಿಕೆಯಿಂದ ಹಂಝ ಆಕೆಯನ್ನು ಕೊಲೆ ಮಾಡಿ, ಮೃತದೇಹವನ್ನು ಮೂರು ತುಂಡುಗಳನ್ನಾಗಿ ಕತ್ತರಿಸಿ ಗೋವಾದಲ್ಲೇ ಹೂತಿದ್ದ. ಬಳಿಕ ಬಾಲಕಿ ಕಾಣೆಯಾಗಿದ್ದಾಳೆ ಎಂದು ಪೋಷಕರಿಗೆ ತಿಳಿಸಿದ್ದ.
ಆಕೆಗೆ ಮನೆಕೆಲಸ ಮಾಡಿಕೊಂಡು ವಿದ್ಯಾಭ್ಯಾಸ ಮಾಡುವಂತೆ ಹೇಳಿ ಕಳುಹಿಸಿಕೊಟ್ಟಿದ್ದರು. ಆದರೆ ಕೆಲವು ತಿಂಗಳುಗಳ ಬಳಿಕ ಹಬ್ಬಕ್ಕೆ ಆಕೆಯನ್ನು ಕರೆದುಕೊಂಡುಬರುತ್ತೇನೆ ಎಂದು ಹೋಗಿದ್ದ ತಂದೆಗೆ ಆಘಾತ ಕಾದಿತ್ತು. ಸಫಿಯಾ ನಿನ್ನೆಯಷ್ಟೇ ಇಲ್ಲಿದ್ದಳು, ಈಗ ಎಲ್ಲಿಗೆ ಹೋಗಿದ್ದಾಳೆಂದು ಗೊತ್ತಿಲ್ಲ ಎಂದು ಕಥೆ ಕಟ್ಟಿದ್ದರು.
ಸಫಿಯಾಳನ್ನು 3 ಭಾಗಗಳಾಗಿ ಕತ್ತರಿಸಿ ಗೋವಾದಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆಯ ಬಳಿ ಹೂತು ಹಾಕಿದ್ದರು. ಪೋಷಕರು ಕೂಡಲೇ ದೂರು ದಾಖಲಿಸಿದ್ದರು, ಸಫಿಯಾ ಕ್ರಿಯಾ ಸಮಿತಿ ಎಂಬ ಸಮಾನ ಮನಸ್ಕರ ಗುಂಪನ್ನು ರಚಿಸಿ 90 ದಿನಗಳ ಕಾಲ ಪ್ರತಿಭಟನೆಯನ್ನೂ ನಡೆಸಿದ್ದರು.
ಕೇರಳ ಸರ್ಕಾರವು ತನಿಖೆಯನ್ನು ಅಪರಾಧ ವಿಭಾಗಕ್ಕೆ ವರ್ಗಾಯಿಸಿತ್ತು. ನಂತರ 2008ರಲ್ಲಿ ಬಾಲಕಿಯ ಅಸ್ಥಿಪಂಜರ ಗೋವಾದಲ್ಲಿ ಪತ್ತೆಯಾಗಿತ್ತು. ಹಂಝನನ್ನು ಬಂಧಿಸಲಾಗಿತ್ತು. ಕಾಸರಗೋಡಿನ ಸೆಷನ್ಸ್ ನ್ಯಾಯಲಯ ಆತನಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. 2019ರಲ್ಲಿ ಕೇರಳ ಹೈಕೋರ್ಟ್ ಶಿಕ್ಷೆಯನ್ನು ಜೀವಾವಧಿಗೆ ಇಳಿಸಿತ್ತು, ಸಫಿಯಾಳ ಅಸ್ತಿಪಂಜರ ಕಾಸರಗೋಡು ನ್ಯಾಯಾಲಯದ ಸುಪರ್ದಿಯಲ್ಲೇ ಇತ್ತು.
ದೇಹದ ಅವಶೇಷಗಳನ್ನು ಹಸ್ತಾಂತರಿಸುವಂತೆ ಪೋಷಕರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ನವೆಂಬರ್ 6ರಂದು ಕಾಸರಗೋಡಿನ ಜಿಲ್ಲಾ ಪ್ರಧಾನ ನ್ಯಾಯಾಲಯ ತಲೆಬುರುಡೆ ಹಾಗೂ ಮೂಳೆಗಳನ್ನು ಹೆತ್ತವರ ವಶಕ್ಕೆ ನೀಡುವಂತೆ ಆದೇಶಿಸಿತ್ತು. ಸೋಮವಾರ ಅಸ್ಥಿಪಂಜರವನ್ನು ಕೊಚ್ಚಿನ್‌ನ ವಿಧಿವಿಜ್ಞಾನ ಪ್ರಯೋಗಾಲಯದಿಂದ ತಂದ ಪೋಷಕರು ಅಯ್ಯಂಗೇರಿ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಿದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಅದರಂತೆ ಕಾಸರಗೋಡು ನ್ಯಾಯಾಲಯದ ಮೂಲಕ ಸಫಿಯಾಳ ಪೋಷಕರು ಅಸ್ಥಿ ಪಂಜರಗಳನ್ನು ಪಡೆದುಕೊಂಡರು. ಕೊಚ್ಚಿಯಿಂದ ತರಲಾಗಿದ್ದ ಸಫಿಯಾಳ ಅಸ್ಥಿ ಪಂಜರವನ್ನು ಅಯ್ಯಂಗೇರಿ ಜಮಾತ್‍ನ ಖಬರ್ ಸ್ಥಾನದಲ್ಲಿ ಹೂಳುವ ಮೂಲಕ ಸಫಿಯಾಳ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದರು.
18 ವರ್ಷಗಳ ಬಳಿಕ ಮಗಳನ್ನ ತಾನು ಅಸ್ತಿಪಂಜರದ ರೂಪದಲ್ಲಿ ನೋಡವುಂತಾಯಿತಲ್ಲಾ ಅಂತ ಕಣ್ಣೀರು ಹಾಕುತ್ತಿದ್ದಾರೆ.