Thursday, December 5, 2024
Homeಉಜಿರೆಸುವರ್ಣಮಹೋತ್ಸವ ಸಂಭ್ರಮದಲ್ಲಿ ಸಾಲಿಗ್ರಾಮ ಮಕ್ಕಳ ಮೇಳ: ಧರ್ಮಸ್ಥಳದಲ್ಲಿ ಸುವರ್ಣ ಪರ್ವ ಉದ್ಘಾಟನೆ

ಸುವರ್ಣಮಹೋತ್ಸವ ಸಂಭ್ರಮದಲ್ಲಿ ಸಾಲಿಗ್ರಾಮ ಮಕ್ಕಳ ಮೇಳ: ಧರ್ಮಸ್ಥಳದಲ್ಲಿ ಸುವರ್ಣ ಪರ್ವ ಉದ್ಘಾಟನೆ

ಉಜಿರೆ: ಸಾಲಿಗ್ರಾಮ ಮಕ್ಕಳ ಮೇಳದ ಬಾಲಕಲಾವಿದರ ಪ್ರತಿಭೆ, ವಾಕ್‌ಚಾತುರ್ಯ, ಪ್ರೌಢ ಅಭಿನಯ, ನಿರರ್ಗಳ ಮಾತುಕತೆ, ಹೃದಯಸ್ಪರ್ಶಿ ಹಾವಭಾವವನ್ನು ಶ್ಲಾಘಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಎಳೆಯ ಕಲಾವಿದರೆ ಯಕ್ಷಗಾನ ಕಲೆಯನ್ನು ಉಳಿಸಿ, ಬೆಳೆಸಿ ಮುಂದಿನ ತಲೆಮಾರಿಗೆ ಹಸ್ತಾಂತರಿಸಲು ಸಮರ್ಥರು ಹಾಗೂ ಪ್ರಬುದ್ಧರು ಎಂದು ಹೇಳಿದರು.
ಅವರು ಗುರುವಾರ ಧರ್ಮಸ್ಥಳದಲ್ಲಿ ಪ್ರವಚನಮಂಟಪದಲ್ಲಿ ಸಾಲಿಗ್ರಾಮ ಮಕ್ಕಳ ಮೇಳದ ಸುವರ್ಣಪರ್ವ ಆಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಹಿರಿಯ ಕಲಾವಿದರ ಕೊರತೆ ಕಾಡುತ್ತಿರುವಾಗ ಎಳೆಯ ಮಕ್ಕಳೆ ಯಕ್ಷಗಾನ ಕಲೆಯನ್ನು ಉಳಿಸಿ, ಬೆಳೆಸಲು ಸಾಧ್ಯ. ಶಾಲಾ-ಕಾಲೇಜುಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳ ಮೇಳದ ಯಕ್ಷಗಾನ ಪ್ರದರ್ಶನ ಆಯೋಜಿಸಿ ಬಾಲಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಅವರು ಹೇಳಿದರು.
1975 ಅ. 10 ರಂದು ಸಾಲಿಗ್ರಾಮದಲ್ಲಿ ದಿವಂಗತ ಕಾರ್ಕಡ ಶ್ರೀನಿವಾಸ ಉಡುಪ ಮತ್ತು ಎಚ್. ಶ್ರೀಧರಹಂದೆ ಅವರ ನೇತೃತ್ವದಲ್ಲಿ ಪ್ರಾರಂಭಿಸಿದ ಮಕ್ಕಳಮೇಳ ಸುವರ್ಣಮಹೋತ್ಸವ ಆಚರಿಸುತ್ತಿರುವುದು ತುಂಬಾ ಸಂತೋಷವಾಗಿದೆ. ಹಲವು ಬಾರಿ ಎಳೆಯ ಕಲಾವಿದರನ್ನು ಧರ್ಮಸ್ಥಳಕ್ಕೆ ಆಹ್ವಾನಿಸಿ ಯಕ್ಷಗಾನ ವೀಕ್ಷಿಸಿ ತಾನು ಹಾಗೂ ಕುಟುಂಬದವರು ಸಂತೋಷ ಪಟ್ಟಿದ್ದೇವೆ ಎಂದು ಹೆಗ್ಗಡೆಯವರು ತಿಳಿಸಿದರು.
ಆಶಯಭಾಷಣ ಮಾಡಿದ ಹವ್ಯಾಸಿ ಯಕ್ಷಗಾನ ಕಲಾವಿದ ಉಜಿರೆ ಅಶೋಕ ಭಟ್ ಮಾತನಾಡಿ, ಯಕ್ಷಗಾನ ಎಂಬ ಆರಾಧನಾ ಜಾನಪದ ಕಲೆಗೆ ಒಂದು ಸಾವಿರ  ವರ್ಷಗಳ ಭವ್ಯ ಇತಿಹಾಸ ಮತ್ತು ಪರಂಪರೆ ಇದೆ. ಪರಿವರ್ತನೆ ಜಗತ್ತಿನ ನಿಯಮ. ಆದರೆ ಪರಿವರ್ತನೆಯ ಹೆಸರಿನಲ್ಲಿ ಕಲೆಯ ಮೂಲ ಸ್ವರೂಪಕ್ಕೆ ಧಕ್ಕೆಯಾಗಬಾರದು. ಯಕ್ಷಗಾನದ ಮೂಲಸ್ವರೂಪ, ವೇಷಭೂಷಣ, ಸಂಪ್ರದಾಯ, ಪೌರಾಣಿಕ ಪ್ರಸಂಗಗಳ ಪ್ರದರ್ಶನ ಮೊದಲಾದ ಕ್ರಮಗಳಿಂದ ಧರ್ಮಸ್ಥಳ ಮೇಳವು ಇತರ ಎಲ್ಲಾ ಮೇಳಗಳಿಗೂ ಆದರ್ಶ ಹಾಗೂ ಅನುಕರಣೀಯವಾಗಿದೆ ಎಂದರು.
ಜನಾರ್ದನಹAದೆ, ಡಿ. ಸುರೇಂದ್ರ ಕುಮಾರ್ ಮತ್ತು ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.
ಎಳೆಯ ಕಲಾವಿದರಿಂದ ಹೂವಿನ ಕೋಲು ಪ್ರದರ್ಶನ ನಡೆಯಿತು.
ಇನ್ನು ಒಂದು ವರ್ಷ ಅಂದರೆ, 2025ರ ಅ.10 ರ ವರೆಗೆ ರಾಜ್ಯದೆಲ್ಲೆಡೆ ಯಕ್ಷಗಾನ ಪ್ರದರ್ಶನ, ವಿಚಾರ ಸಂಕಿರಣ, ಕಮ್ಮಟ, ತಾಳಮದ್ದಳೆ, ಶಾಲಾ-ಕಾಲೇಜುಗಳಲ್ಲಿ ಪ್ರಾತ್ಯಕ್ಷಿಕೆ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಮಕ್ಕಳ ಮೇಳದ ನಿರ್ದೇಶಕ ಎಚ್. ಸುಜಯೀಂದ್ರ ಹಂದೆ ಪ್ರಕಟಿಸಿದರು.
ರಾಘವೇಂದ್ರ ನಾಯರ್ ಸ್ವಾಗತಿಸಿದರು. ಮಕ್ಕಳಮೇಳ ಟ್ರಸ್ಟ್ನ ಕಾರ್ಯಾಧ್ಯಕ್ಷ ಕೆ. ಮಹೇಶ್ ಉಡುಪ ಧನ್ಯವಾದವಿತ್ತರು. ಮಕ್ಕಳಮೇಳದ ನಿರ್ದೇಶಕ ಎಚ್. ಸುಜಯೀಂದ್ರ ಹಂದೆ ಕಾರ್ಯಕ್ರಮ ನಿರ್ವಹಿಸಿದರು.

RELATED ARTICLES
- Advertisment -
Google search engine

Most Popular