Saturday, September 14, 2024
Homeರಾಜ್ಯಸಮುದ್ರ ನೀರಾಜನ, ಸಾಗರೇಶ್ವರ ಪೂಜೆ

ಸಮುದ್ರ ನೀರಾಜನ, ಸಾಗರೇಶ್ವರ ಪೂಜೆ

ಬೈಂದೂರು:ತಾಲೂಕಿನ ಹೊಸಾಡು ಗ್ರಾಮದ ಕಂಚುಗೋಡು ಶ್ರೀರಾಮ ದೇವಸ್ಥಾನದ ಸುವರ್ಣ ಮಹೋತ್ಸವ ಅಂಗವಾಗಿ ಹಾಗೂ ಮಸ್ತ್ಯ ಸಮೃದ್ಧಿಗಾಗಿ ಸಮುದ್ರ ನೀರಾಜನ,ಸಾಗರೇಶ್ವರ ಪೂಜೆಯನ್ನು ಡಾ.ಎ ಚೆನ್ನಕೇಶವ ಗಾಯತ್ರಿ ಭಟ್ ಗಜಪುರ ಆನಗಳ್ಳಿ ಅವರ ಮುಂದಾಳತ್ವದಲ್ಲಿ,ಭವ್ಯ ವೇದಿಕೆಯಲ್ಲಿ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸೋಮವಾರ ವಿಜೃಂಭಣೆಯಿಂದ ನಡೆಯಿತು.ಸಮುದ್ರ ರಾಜನಿಗೆ ಆರತಿ ಬೆಳಗಿ ಪೂಜೆಯನ್ನು ಸಲ್ಲಿಸಲಾಯಿತು.ಸಹಸ್ರಾರು ಭಕ್ತರು ಸಾಗರೇಶ್ವರ ಪೂಜೆಯಲ್ಲಿ ಭಾಗವಹಿಸಿದ್ದರು.

ಸಮುದ್ರ ನೀರಾಜನ ಸಾಗರೇಶ್ವರ ಪೂಜೆ ಅಂಗವಾಗಿ ಶ್ರೀರಾಮ ದೇವಸ್ಥಾನದಲ್ಲಿ ವಿಷ್ಣು ಸಹಸ್ರನಾಮ ಹೋಮ,ಭಜನಾ ಕಾರ್ಯಕ್ರಮ,ಅನ್ನಸಂತರ್ಪಣೆ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಿತು.

ಶ್ರೀನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠ ನರಸೀಪುರ ಹಾವೇರಿ ಜಗದ್ಗುರು ಶ್ರೀಶಾಂತ ಭೀಷ್ಮ ಚೌಡಯ್ಯ ಮಹಾಸ್ವಾಮಿಗಳವರ ದಿವ್ಯ ಉಪಸ್ಥಿತಿಯಲ್ಲಿ ಅಷ್ಟಾವಧಾನ ಸೇವೆ,ಗುರುಉಪದೇಶಾಮೃತ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಜರುಗಿತು.

ಜಗದ್ಗುರು ಶ್ರೀ ಶಾಂತ ಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಮಾತನಾಡಿ,ನೂರಾರು ನದಿಗಳನ್ನು ಆರಾಧನೆ ಮಾಡುವುದು ಕಷ್ಟದಾಯಕವಾಗಿದೆ.ಎಲ್ಲಾ ನದಿಗಳು ಸೇರುವುದು ಸಮುದ್ರದಲ್ಲಿ ಹಾಗಾಗಿ ಸಮುದ್ರ ಪೂಜೆಯನ್ನು ನೆರವೇರಿಸಲಾಗುತ್ತದೆ ಎಂದು ಸಮುದ್ರ ನೀರಾಜನ ಪೂಜೆಯ ಮಹತ್ವವನ್ನು ವಿವರಿಸಿದರು.ಗಂಗಾ ಮಾತೆ ಆಶೀರ್ವಾದ ಮೀನುಗಾರರ ಮೇಲೆ ಸದಾ ಇರುತ್ತದೆ, ಸಮುದ್ರ ನೀರಾಜನ ಪೂಜೆಯಿಂದ ಸಂತುಷ್ಟನಾದ ಸಮುದ್ರ ರಾಜನು ಒಳ್ಳೆಯದು ಮಾಡಲಿದ್ದಾನೆ ಎಂದು ಹೇಳಿದರು.
ಅಂಬಿಗರ ಚೌಡಯ್ಯ ಅವರ ಮಹಿಮೆ ಅಪಾರವಾದದ್ದು ಈ ಭಾಗದಲ್ಲಿ ಅಂಬಿಗರ ಚೌಡಯ್ಯ ಜಯಂತಿ ಆಚರಣೆ ಮಾಡಲು ಮುನ್ನೇಡೆಯ ಬೇಕು ಎಂದು ಹೇಳಿದರು.

ಸ್ವಾಮಿಗಳು ಆಶೀರ್ವಚನ ನೀಡಿದ ಬಳಿಕ ಮೆರವಣಿಗೆ ಮೂಲಕ ಸಮುದ್ರ ಕಿನಾರೆ ಬಳಿ ತೆರಳಿ ಸಾಗರೇಶ್ವರ ಪೂಜೆಯನ್ನು ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿಸಲಾಯಿತು. ಭಕ್ತರು ಭಕ್ತಿಯಲ್ಲಿ ಮಿಂದೆದ್ದರು, ವಿದ್ಯುತ್ ದೀಪ, ಸೂಡು ಮದ್ದು ಪ್ರದರ್ಶನ ನೊಡುಗರ ಮನ ಸೆಳೆಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರು,ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷರು ಮತ್ತು ಗೌರವಾಧ್ಯಕ್ಷರು, ಮಹಿಳಾ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು,ಗ್ರಾಮಸ್ಥರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular