ಗುತ್ತಿಗಾರು: ಇಲ್ಲಿನ ಎಲಿಮಲೆ ಸರ್ಕಾರಿ ಪ್ರೌಢಶಾಲೆಯ ಮೈದಾನದ ಒಂದು ಬದಿ ಕುಸಿದು 20ಕ್ಕೂ ಅಧಿಕ ಕೋಳಿಗಳು ಮೃತಪಟ್ಟಿವೆ. ತಡೆಗೋಡೆ ಕುಸಿದುಬಿದ್ದ ಪರಿಣಾಮ ಪಕ್ಕದ ವಿದ್ಯುತ್ ಕಂಬವೂ ಕುಸಿದುಬಿದ್ದಿದೆ. ಪಕ್ಕದ ಮನೆಗೂ ಹಾನಿಯಾಗಿದೆ. ಆದರೆ ಮನೆಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶಾಲೆಯ ಒಂದು ಭಾಗದ ತಡೆಗೋಡೆಯನ್ನು ಕೆಲವು ದಿನಗಳ ಹಿಂದೆ ಏರಿಸಿ ಮಣ್ಣು ತುಂಬಲಾಗಿತ್ತು. ತಡೆಗೋಡೆ ಕುಸಿದ ಪರಿಣಾಮ ವಿದ್ಯುತ್ ಕಂಬವೂ ಬಿದ್ದಿತು. ಇದರಿಂದ ಪಕ್ಕದ ಜಗದೀಶ ಅಂಬೆಕಲ್ಲು ಮನೆಗೆ ಹಾನಿಯಾಗಿದೆ. ಅವರು ಶೆಡ್ ನಿರ್ಮಿಸಿ ಕೋಳಿಗಳನ್ನು ಸಾಕುತ್ತಿದ್ದರು. ಹೀಗಾಗಿ ಮಣ್ಣಿನಡಿಗೆ ಬಿದ್ದು ಕೋಳಿಗಳು ಸಾವಿಗೀಡಾಗಿವೆ. ಸುಮಾರು 20,000 ರೂ. ನಷ್ಟವಾಗಿದೆ ಎಂದು ವರದಿಯಾಗಿದೆ.