ಸುಂದರ ಸ್ವರ್ಗದಂತಿದ್ದ ವಯನಾಡು ಒಂದು ರಾತ್ರಿ ಬೆಳಗಾಗುವುದರೊಳಗೆ ಭಯಾನಕ ನರಕದಂತಾಗಿತ್ತು. ಎಲ್ಲಿ ನೋಡಿದರೂ ಶವಗಳು, ಒಂದಕ್ಕೆ ಕೈ ಇಲ್ಲ, ಇನ್ನೊಂದಕ್ಕೆ ಕಾಲಿಲ್ಲ, ರುಂಡ ಇಲ್ಲ… ಹೀಗೆ ರುಂಡ ಮುಂಡವಿಲ್ಲದ ಅಪಾರ ಶವಗಳು ಎಲ್ಲೆಲ್ಲೂ ಕಂಡುಬಂದವು. ಆದರೆ ಇಂತಹ ರಣಭೀಕರ ಪ್ರಕೃತಿ ದುರಂತದ ಬಗ್ಗೆ ಬಾಲಕಿಯೊಬ್ಬಳು ಭವಿಷ್ಯ ನುಡಿದಂತಹ ರೀತಿ ಕಥೆಯೊಂದರಲ್ಲಿ ಒಂದು ವರ್ಷ ಮೊದಲೇ ಮುನ್ಸೂಚನೆ ನೀಡಿರುವುದು ಈಗ ಬೆಳಕಿಗೆ ಬಂದಿದೆ.
ವೆಲ್ಲಾರ್‌ಮಲಾದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಒಂದು ವರ್ಷದ ಹಿಂದೆ ಶಾಲೆಯ ಮ್ಯಾಗಜಿನ್‌ಗೆ ಬರೆದ ಕಥೆಯೊಂದು ಈಗಿನ ವಯನಾಡು ದುರಂತಕ್ಕೆ ಯಥಾವತ್ ಹೋಲಿಕೆಯಾಗಿದೆ. 2023ರಲ್ಲಿ ಈ ವೆಲ್ಲಾರ್‌ಮಲಾದ ಸರ್ಕಾರಿ ಶಾಲೆ ಪ್ರಕಟಿಸಿದ್ದ ʻಲಿಟಲ್ ಕೈಟ್ಸ್ʼ ಮ್ಯಾಗಜಿನ್‌ನಲ್ಲಿ 8ನೇ ತರಗತಿ ವಿದ್ಯಾರ್ಥಿನಿ ಲಯ ಬರೆದ ಕಥೆ ಇಂದು ದೊಡ್ಡ ಚರ್ಚೆಯನ್ನೇ ಹುಟ್ಟು ಹಾಕಿದೆ. ದುರದೃಷ್ಟಕ್ಕೆ ಈ ವರ್ಷ ಈ ಬಾಲಕಿಯ ಹೆತ್ತವರು ವಯನಾಡಿನ ಮೆಪ್ಪಾಡಿ ಪ್ರದೇಶಕ್ಕೆ ವರ್ಗಾವಣೆಗೊಂಡು ಅಲ್ಲೇ ಶಾಲೆಗೆ ಸೇರಿಸಿದ್ದರು. ದುರಂತದಲ್ಲಿ ಬಾಲಕಿ ಲಯ ಸೇಫ್ ಆಗಿದ್ದಾಳೆ. ಆದರೆ ಆಕೆ ಮತ್ತು ಆಕೆಯ ತಾಯಿಯನ್ನು ರಕ್ಷಿಸಿದ ಆಕೆಯ ತಂದೆ ಮಾತ್ರ ಮಹಾಪ್ರವಾಹದಲ್ಲಿ ಕೊಚ್ಚಿಹೋಗಿರುವ ಮನಕಲಕುವ ಘಟನೆ ನಡೆದಿದೆ.
ಕಥೆಯಲ್ಲೇನಿದೆ?
ಆಸೆಯೇ ದುಃಖಕ್ಕೆ ಮೂಲ: ʻಆಗ್ರಹತಿಂತೆ ದುರಾನುಭವಂʼ ಅಂದರೆ ಆಸೆಯೇ ದುಃಖಕ್ಕೆ ಮೂಲ ಎಂಬರ್ಥದ ಕಥೆಯ ಶೀರ್ಷಿಕೆ ನೀಡಿ ಲಯ ಈ ಕಥೆ ಬರೆದಿದ್ದಳು. ಕಥೆ ಹೀಗಿದೆ… ಮುದ್ದಾದ ಪುಟ್ಟ ಹುಡುಗಿಯೊಬ್ಬಳು ಜಲಪಾತದಲ್ಲಿ ಮುಳುಗಿ ಸಾವನ್ನಪ್ಪಿರುತ್ತಾಳೆ. ಸಾವಿನ ಬಳಿಕ ಆಕೆ ಮತ್ತೆ ಮುದ್ದಾದ ಗಿಳಿಯ ರೂಪದಲ್ಲಿ ಪುನರ್ಜನ್ಮ ಪಡೆಯುತ್ತಾಳೆ. ಮಾತಾಡುವ ಈ ಮುದ್ದಿನ ಗಿಣಿ ಹಲವು ಭವಿಷ್ಯಗಳನ್ನು ನುಡಿಯುತ್ತಿತ್ತು. ಒಂದೂರಿನಲ್ಲಿ ಅಲಂಕೃತಾ ಹಾಗೂ ಅನುಸ್ವರ ಎನ್ನುವ ಗೆಳತಿಯರಿದ್ದರು. ಇವರಿಬ್ಬರೂ ದಿನವೂ ಒಟ್ಟಿಗೆ ಶಾಲೆಗೆ ಹೋಗಿ ಬರುತ್ತಿದ್ದರು. ಒಂದು ದಿನ ಅಲಂಕೃತಾ ಹಾಗೂ ಅನುಸ್ವರ ಪ್ರವಾಸ ಕೈಗೊಳ್ಳಲು ಯೋಜನೆ ರೂಪಿಸುತ್ತಾರೆ. ಮನೆಯವರಿಗೂ ಹೇಳದೇ ಒಂದು ನದಿ ದಂಡೆಗೆ ಪ್ರವಾಸಕ್ಕೆ ಬರುತ್ತಾರೆ. ನದಿಯ ದಂಡೆಯಲ್ಲಿ ಇಬ್ಬರು ಖುಷಿಯಿಂದ ಓಡಾಡುತ್ತಿದ್ದರು. ಹೀಗೆ ಜಲಪಾತದ ಸೊಬಗನ್ನು ಸವಿಯುತ್ತಿರುವಾಗ, ಭವಿಷ್ಯ ನುಡಿಯುವ ಗಿಣಿಯೊಂದು ಅಲ್ಲಿಗೆ ಹಾರಿ ಬಂದಿತು. ಚೆಂದದ ಗಿಣಿ ಅಸಾಮಾನ್ಯವಾಗಿತ್ತು; ಅದು ಮಾತನಾಡುತ್ತಿತ್ತು.
ಮಕ್ಕಳನ್ನು ಕಂಡ ಗಿಳಿಯು, ‘ಮಕ್ಕಳೇ, ಬೇಗ ಇಲ್ಲಿಂದ ಪಾರು. ದೊಡ್ಡ ಅಪಾಯ ಬರಲಿದೆ. ನೀವು ಸುರಕ್ಷಿತವಾಗಿರಬೇಕಾದರೆ ಕೂಡಲೇ ಇಲ್ಲಿಂದ ಓಡಿ ಹೋಗಿ’ ಎಂದು ಹೇಳಿತ್ತು. ಹೀಗೆ ಹೇಳಿದ ಮೇಲೆ ಗಿಳಿ ಅಲ್ಲಿಂದ ಹಾರಿಹೋಯಿತು. ಗಿಳಿಯ ಎಚ್ಚರಿಕೆಯನ್ನು ಅರ್ಥಮಾಡಿಕೊಂಡ ಮಕ್ಕಳು ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ ಓಡಲು ಪ್ರಾರಂಭಿಸಿದರು. ಕೆಲವೇ ಕ್ಷಣಗಳಲ್ಲಿ ಊರಿಗೆ ಊರೇ ಜಲ ಪ್ರಳಯಕ್ಕೆ ಸಿಕ್ಕಿ, ಗುಡ್ಡು ಕುಸಿತಕ್ಕೆ ಬಲಿಯಾಗಿ ಸರ್ವನಾಶವಾಗುತ್ತದೆ.
ಆ ಗೆಳತಿಯರಿಬ್ಬರು ಓಡುತ್ತಾ ತಿರುಗಿ ನೋಡಿದರೆ, ಎಲ್ಲೆಲ್ಲೂ ನೀರು.. ನುಗ್ಗುತ್ತಿರುವ ಕಲ್ಲು ಬಂಡೆಗಳು ಕಂಡವು. ಕೆಲವೇ ಕ್ಷಣಗಳಲ್ಲೇ ಭವಿಷ್ಯ ನುಡಿಯುವ ಗಿಣಿ ಸುಂದರ ಬಾಲಕಿಯಾಗಿ ಪರಿವರ್ತನೆಗೊಳ್ಳುವುದನ್ನು ಅವರಿಬ್ಬರು ಕಂಡರು. ಆ ಸುಂದರ ಹುಡುಗಿ ಮತ್ತಷ್ಟು ಜನರನ್ನು ಅಪಾಯದಿಂದ ಪಾರು ಮಾಡುವುದಕ್ಕಾಗಿ ಎಚ್ಚರಿಸಲು ಅನುವಾದಳು. ಹುಡುಗಿಯೊಬ್ಬಳು.. ಗಿಣಿಯಾಗಿ.. ಮತ್ತೆ ಹುಡುಗಿಯಾಗಿ… ಮುಂದುವರಿಯುವ ಈ ಗಿಣಿ ಭವಿಷ್ಯದ ರೋಚಕ ಕಥೆಯನ್ನು ಲಯ ಬರೆದಿದ್ದಳು. ವರ್ಷಕ್ಕೆ ಮುಂಚೆಯೇ ಇಂಥದ್ದೊಂದು ಕಥೆಯನ್ನು ಲಯ ಬರೆದು ಎಚ್ಚರಿಸಿದ್ದಳು ಎನ್ನುವ ವಿಚಾರ ಈಗ ಮುನ್ನೆಲೆಗೆ ಬಂದಿದೆ.
ಅಪ್ಪನನ್ನು ಕಳೆದುಕೊಂಡ ಲಯ: ಇದನ್ನು ನೆನೆನೆನೆದು ಶಾಲಾ ಮುಖ್ಯ ಶಿಕ್ಷಕ ಉನ್ನಿಕೃಷ್ಣನ್ ಕಣ್ಣೀರು ಹಾಕುತ್ತಿದ್ದಾರೆ. ಆ ಮ್ಯಾಗಜಿನ್ ತೆರೆದರೆ ಲಯ ಬರೆದ ಕಥೆಯೇ ಕಣ್ಣ ಮುಂದೆ ಬರುತ್ತದೆ ಎಂದು ಅವರು ಹೇಳಿದ್ದಾರೆ. ಇದು ಸುದ್ದಿಯಾಗುತ್ತಿದ್ದಂತೆ ಲಯ ಬರೆದ ಕಥೆಯ ಬಗ್ಗೆ ಈಗ ವ್ಯಾಪಕ ಚರ್ಚೆಗಳಾಗುತ್ತಿವೆ. ಇಂತಹ ಕಥೆ ಬರೆದ ಲಯ ಎಲ್ಲಿದ್ದಾಳೆ? ಆಕೆ ಸೇಫ್ ಆಗಿದ್ದಾಳಾ? ಆಕೆಯೂ ಈ ಮಹಾದುರಂತದಲ್ಲಿ ಸಿಲುಕಿದಳಾ? ಎಂಬ ಪ್ರಶ್ನೆಗಳು ಎದ್ದಿದ್ದವು. ಅದೃಷ್ಟವಶಾತ್ ಆಕೆ ಸೇಫ್ ಆಗಿದ್ದಾಳೆ ಎಂದು ಶಿಕ್ಷಕರೇ ಮಾಹಿತಿ ನೀಡಿದ್ದಾರೆ. ಆದರೆ ದುರದೃಷ್ಟವಶಾತ್ ಆಕೆಯ ತಂದೆಯನ್ನು ಆಕೆ ಈ ದುರಂತದಲ್ಲಿ ಕಳೆದುಕೊಂಡಿದ್ದಾಳೆ. ಹೌದು, ಕಥೆಯಲ್ಲಿ ಭೀಕರ ದುರಂತದ ಮುನ್ನೆಚ್ಚರಿಕೆ ನೀಡಿದ್ದ ಲಯಳ ಅಪ್ಪ ಈಗ ಇಲ್ಲ. ಅವರು ಈ ಘನಘೋರ ದುರಂತದಲ್ಲಿ ಕೊಚ್ಚಿಹೋಗಿದ್ದಾರೆ. ಚೆನ್ನಾಗಿ ಓದುತ್ತಿದ್ದ ಲಯ ಬಗ್ಗೆ ಅಪ್ಪನಿಗೆ ಎಲ್ಲಿಲ್ಲದ ಪ್ರೀತಿಯಿತ್ತು. ಲಯ ಹಾಗೂ ಆಕೆಯ ಅಮ್ಮನನ್ನು ರಕ್ಷಿಸಿದ್ದ ಅಪ್ಪ ಕೊಚ್ಚಿಕೊಂಡು ಹೋಗಿದ್ದಾರೆ. ಲಯ ಮತ್ತು ಅಮ್ಮ ಈಗ ಅವರ ಸಂಬಂಧಿಕರ ಮನೆಯಲ್ಲಿ ಸುರಕ್ಷಿತವಾಗಿದ್ದಾರೆ.