ಮಂಗಳೂರು: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಇಂದಿನಿಂದ ಆರಂಭಗೊಂಡಿದೆ. ಈಗಾಗಲೇ ಪ್ರವೇಶಾತಿ ಪ್ರಕ್ರಿಯೆ ನಡೆಯುತ್ತಿದ್ದು, ಮೇ 31ರಿಂದ ಶಾಲೆ ಪ್ರಾರಂಭವಾಗಲಿದೆ.
ಬಹುತೇಕ ಶಾಲೆಗಳ ಆವರಣಗಳ ಸ್ವಚ್ಛತೆ, ವಿದ್ಯಾರ್ಥಿಗಳನ್ನು ಆಕರ್ಷಿಸಲು ಬೇಕಾದ ಸಿದ್ಧತೆಗಳು ನಡೆದಿವೆ. ವಿದ್ಯಾರ್ಥಿಗಳಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಶೈಕ್ಷಣಿಕ ಚಟುವಟಿಕೆ ಇಂದಿನಿಂದ ಆರಂಭವಾದರೂ ಶುಕ್ರವಾರದಿಂದ ಶಾಲೆಗಳ ಪ್ರಾರಂಭೋತ್ಸವ ನಡೆಯಲಿದೆ. ಶಾಲೆಯ ಮುಖ್ಯದ್ವಾರಗಳಲ್ಲಿ ತಳಿರು ತೋರಣಗಳಿಂದ ಶೃಂಗರಿಸಿ, ವಿದ್ಯಾರ್ಥಿಗಳಿಗೆ ಸಿಹಿ ನೀಡಿ ಅದ್ದೂರಿಯಾಗಿ ಆಹ್ವಾನಿಸಲಾಗುತ್ತದೆ. ಊರಿನ ಹಿರಿಯರು, ಗಣ್ಯರು, ದಾನಿಗಳು, ಶಿಕ್ಷಣ ಪ್ರೇಮಿಗಳನ್ನು ಕರೆಸಿ ಕಾರ್ಯಕ್ರಮಗಳನ್ನು ನಡೆಸಲು ಶಾಲೆಗಳಿಗೆ ಸೂಚಿಸಲಾಗಿದೆ. ಹೀಗಾಗಿ ಎಲ್ಲೆಡೆ ಇದಕ್ಕೆ ಭರದ ಸಿದ್ಧತೆಗಳು ನಡೆದಿವೆ.