ಬೆಂಗಳೂರು: ಸ್ಕೂಟರ್ ನಲ್ಲಿ ತ್ರಿಬಲ್ ರೈಡಿಂಗ್ ಹೋಗಿದ್ದಲ್ಲದೆ, ವ್ಹೀಲಿಂಗ್ ಮಾಡಲು ಹೋಗಿ ಆಯತಪ್ಪಿ ಜಲಮಂಡಳಿಯಿಂದ ತೋಡಲಾಗದ್ದ ಗುಂಡಿಗೆ ಬಿದ್ದು, ಒಬ್ಬ ಸಾವನ್ನಪ್ಪಿ, ಇನ್ನಿಬ್ಬರು ಗಾಯಗೊಂಡ ಘಟನೆ ನಡೆದಿದೆ. ಕೆಂಗೇರಿ ಸಮೀಪದ ಕೊಮ್ಮಘಟ್ಟ ಸರ್ಕಲ್ ನಲ್ಲಿ ಈ ಘಟನೆ ನಡೆದಿದೆ. ಜಗಜೀವನರಾಮ್ ನಗರದ ಸದ್ದಾಂ ಹುಸೇನ್ ಸಾವನ್ನಪ್ಪಿದ ದುರ್ದೈವಿಯಾಗಿದ್ದು, ಉಮ್ರಾನ್ ಪಾಷಾ ಹಾಗೂ ಮುಬಾರಕ್ ಪಾಷಾ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಜಲಮಂಡಳಿಯಿಂದ ತೋಡಲಾಗಿದ್ದ ಹತ್ತು ಅಡಿ ಆಳದ ಗುಂಡಿಗೆ ಸ್ಕೂಟರ್ ಬಿದ್ದಿತ್ತು. ಪೈಪ್ ಲೈನ್ ಕಾಮಗಾರಿಗಾಗಿ ಗುಂಡಿ ಅಗೆಯಲಾಗಿತ್ತು. ಇಲ್ಲಿ ಯಾವುದೇ ಬ್ಯಾರಿಕೇಡ್ ಅಥವಾ ಸೂಚನಾ ಫಲಕ ಅಳವಡಿಸಿಲ್ಲ. ಹೀಗಾಗಿ ದುರಂತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆದರೆ ಯುವಕರು ತ್ರಿಬಲ್ ರೈಡಿಂಗ್ ನಲ್ಲಿ ವೇಗವಾಗಿ ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದು, ವ್ಹೀಲಿಂಗ್ ಕೂಡ ಮಾಡುತ್ತಿದ್ದರು. ವ್ಹೀಲಿಂಗ್ ಮಾಡುವಾಗ ಸ್ಕೂಟರ್ ಲೈಟ್ ಮೇಲೆ ಹೋಗಿ ಕೆಳಗೆ ಹೊಂಡವಿದ್ದುದು ಕಂಡು ಬಾರದ ಹಿನ್ನೆಲೆಯಲ್ಲಿ ಅವರು ಗುಂಡಿಗೆ ಬಿದ್ದಿರುವ ಸಾಧ್ಯತೆಯಿದೆ ಎಂದು ವ್ಯಕ್ತಿಯೊಬ್ಬರು ಹೇಳಿರುವುದಾಗಿ ವರದಿಯೊಂದು ತಿಳಿಸಿದೆ. ಯುವಕರು ಸ್ಕೂಟರ್ ನಲ್ಲಿ ವ್ಹೀಲಿಂಗ್ ಮಾಡುತ್ತಿದ್ದುದನ್ನು ಅವರು ನೋಡಿರುವುದಾಗಿ ತಿಳಿಸಿದ್ದಾರೆ ಎಂದೂ ವರದಿಯಾಗಿದೆ.