ವಿಶ್ವದ ಎರಡನೇ ಅತಿದೊಡ್ಡ ವಜ್ರ ದಕ್ಷಿಣ ಆಫ್ರಿಕಾದ ಬೋಟ್ಸವಾನಾದಲ್ಲಿ ಪತ್ತೆಯಾಗಿದೆ. ಕೆನಡಾದ ವಜ್ರದ ಗಣಿಗಾರಿಕೆಯ ಕಂಪನಿಯಾದ ಲುಕಾರ ಡೈಮಂಡ್ಗೆ ಈ ವಜ್ರ ಸಿಕ್ಕಿದ್ದು, ಸುಮಾರು 120 ವರ್ಷಗಳ ಬಳಿಕ ಇಂತಹದೊಂದು ದೊಡ್ಡ ವಜ್ರ ಪತ್ತೆಯಾಗಿದೆ ಎಂದು ಲುಕಾರ ಡೈಮಂಡ್ ಹೇಳಿದೆ. 2,492 ಕ್ಯಾರೆಟ್ ವಜ್ರ ಪತ್ತೆಯಾಗಿರುವ ಬಗ್ಗೆ ಸಂಸ್ಥೆ ತಿಳಿಸಿದೆ.
1905ರಲ್ಲಿ ಇದೇ ದಕ್ಷಿಣ ಆಫ್ರಿಕಾದಲ್ಲಿ 3,106 ಕ್ಯಾರೆಟ್ ವಜ್ರ ಪತ್ತೆಯಾಗಿತ್ತು. ಅದು ಜಗತ್ತಿನ ಅತ್ಯಂತ ದೊಡ್ಡ ವಜ್ರ ಎಂದೇ ಖ್ಯಾತಿ ಪಡೆದಿದೆ. ಅದಾದ ಬಳಿಕ ಈಗ ಸಿಕ್ಕಿರುವ ವಜ್ರವೇ ಎರಡನೇ ಸ್ಥಾನ ಪಡೆದುಕೊಂಡಿದೆ. ಸುಮಾರು ಅಂಗೈ ಅಗಲದಷ್ಟಿರುವ ಈ ಡೈಮಂಡ್ ಬೋಟ್ಸವಾನಾದ ರಾಜಧಾನಿ ಆದ ಗಬೊರೊನೆ ಬಳಿಯಲ್ಲಿರುವ ಕರೋವಾ ಗಣಿ ಬಳಿ ದೊರಕಿದೆ.
2019ರಲ್ಲಿ ಇದೇ ಗಣಿಗಾರಿಕೆ ಕಂಪನಿಗೆ ಸುಮಾರು 1,758 ಕ್ಯಾರೆಟ್ ವಜ್ರವೊಂದು ಸಿಕ್ಕಿತ್ತು. ಆಗ ಅದನ್ನು ಜಗತ್ತಿನ ಎರಡನೇ ಅತಿದೊಡ್ಡ ವಜ್ರವಾಗಿ ಪರಿಗಣಿಸಲಾಗಿತ್ತು. ಈಗ ಮತ್ತೆ ಅದೇ ಕರೋವಾ ಮೈನಿಂಗ್ಸ್ನಲ್ಲಿ 2,492 ಕ್ಯಾರೆಟ್ ವಜ್ರ ದೊರಕಿದ್ದು, ಕಂಪನಿಯ ಖುಷಿಗೆ ಪಾರವೇ ಇಲ್ಲದಂತಾಗಿದೆ. ಇದರ ಮಾರುಕಟ್ಟೆ ಬೆಲೆ ಅಂದಾಜು 40 ಮಿಲಿಯನ್ ಡಾಲರ್ ಎನ್ನಲಾಗುತ್ತಿದ್ದು, ಭಾರತೀಯ ಕರೆನ್ಸಿಯಲ್ಲಿ ಅದು ಬರೋಬ್ಬರಿ 3,35,49,98,000 ಆಗಲಿದೆ. ಇದೊಂದು ಅಂದಾಜು ಅಷ್ಟೇ, ಇನ್ನೂ ಹೆಚ್ಚಿನ ಬೆಲೆ ಇದಕ್ಕೆ ದೊರೆಯಬಹುದು ಎಂದೂ ಅಂದಾಜಿಸಲಾಗಿದೆ.
ಈ ಬಗ್ಗೆ ಮಾತನಾಡಿರುವ ಲುಕಾರ ಗಣಿಗಾರಿಕೆ ಸಂಸ್ಥೆಯ ಮುಖ್ಯಸ್ಥ ವಿಲಿಯಮ್ ಲ್ಯಾಂಬ್, ಅತಿದೊಡ್ಡ ಡೈಮಂಡ್ ಪತ್ತೆ ಮಾಡಲು ನಾವು ಡೈಮಂಡ್ ರಿಕವರಿ ಎಕ್ಸ್ರೇ ಅನ್ನೋ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡಿದ್ದೆವು. ಆ ತಂತ್ರಜ್ಞಾನ ಸಹಾಯದಿಂದ ಈ ಒಂದು ವಜ್ರ ನಮ್ಮ ಕೈಸೇರಿದೆ ಎಂದು ಹೇಳಿದ್ದಾರೆ.
