ಪ್ರೊ. ಗಣಪತಿ ಭಟ್ ಕುಳಮರ್ವ, ರಾಮಕೃಷ್ಣ ಭಟ್, ಚೊಕ್ಕಾಡಿ ಮತ್ತು ದಾಸಪ್ಪ ಗೌಡ ಕೊಲ್ಲಿ – ಇವರನ್ನು ಗೌರವಿಸಲಾಯಿತು.
ಬೆಳ್ತಂಗಡಿ: ಬೆಳ್ತಂಗಡಿ ತಾಲ್ಲೂಕು ಸರ್ಕಾರಿ ನಿವೃತ್ತ ನೌಕರರು ಮತ್ತು ಹಿರಿಯ ನಾಗರಿಕರ ಸೇವಾ ಸಂಸ್ಥೆಯ ಆಶ್ರಯದಲ್ಲಿ ಪ್ರೊ. ಗಣಪತಿ ಕುಳಮರ್ವ, ಬೆಳಾಲು ಎಸ್.ಡಿ.ಎಂ. ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್, ಚೊಕ್ಕಾಡಿ ಮತ್ತು ದಾಸಪ್ಪ ಗೌಡ ಕೊಲ್ಲಿ ಇವರ ಸೇವೆ-ಸಾಧನೆಯನ್ನು ಮನ್ನಿಸಿ ಬೆಳ್ತಂಗಡಿಯಲ್ಲಿ ಅಂಬೇಡ್ಕರ್ ಭವನದಲ್ಲಿ ಇತ್ತೀಚೆಗೆ ನಡೆದ ಸಂಘದ ಮಾಸಿಕ ಸಭೆಯಲ್ಲಿ ಗೌರವಿಸಲಾಯಿತು.
ಹಿರಿಯರನ್ನು ಗೌರವಿಸಿ ಸನ್ಮಾನಿಸಿದ ಪ್ರಜಾವಾಣಿ ಪತ್ರಿಕೆಯ ವರದಿಗಾರ ಆರ್.ಎನ್. ಪೂವಣಿ ಮಾತನಾಡಿ, ಮೂರು ಮಂದಿ ಹಿರಿಯ ಸಾಧಕರ ಸೇವೆ, ಸಾಧನೆ ಕಿರಿಯರಿಗೆ ಪ್ರೇರಕ ಶಕ್ತಿಯಾಗಿ ಸ್ಪೂರ್ತಿಯಾಗಿದೆ. ಅವರ ದಕ್ಷ ಸೇವೆಗೆ ಅಭಿನಂದಿಸಿ ಶುಭ ಹಾರೈಸಿದರು.
ಸಂಘದ ಕಟ್ಟಡ ನಿರ್ಮಾಣಕ್ಕೆ ಒಂದು ಲಕ್ಷ ರೂ. ಗೂ ಅಧಿಕ ದೇಣಿಗೆ ನೀಡಿದ ನಿವೃತ್ತ ಮುಖ್ಯೋಪಾಧ್ಯಾಯ ಬಿ. ಸೋಮಶೇಖರ ಶೆಟ್ಟಿ ಇವರನ್ನು ಗೌರವಿಸಲಾಯಿತು. ಸಂಘದ ಅಧ್ಯಕ್ಷರಾದ ಬಿ. ವಿಠಲ ಶೆಟ್ಟಿ ಅವರ ದಕ್ಷ ನೇತೃತ್ವದಲ್ಲಿ ಸರ್ವ ಸದಸ್ಯರ ಸಕ್ರಿಯ ಸಹಕಾರದೊಂದಿಗೆ ಕಟ್ಟಡ ಕಾಮಗಾರಿ ಶೀಘ್ರ ಪೂರ್ಣಗೊಳ್ಳಲೆಂದು ಪೂವಣಿ ಅವರು ಶುಭ ಹಾರೈಸಿದರು. ಸಂಘದ ಅಧ್ಯಕ್ಷರಾದ ಬಿ. ವಿಠಲ ಶೆಟ್ಟಿ ಅಧ್ಯಕ್ಷತೆ ವಹಿಸಿದರು.
ಇತೀಚೆಗೆ ನಿಧನರಾದ ನಿವೃತ್ತ ಮುಖ್ಯೋಪಾಧ್ಯಾಯ ಕಾಶ್ಮೀರ್ ಮಿನೇಜಸ್ ಅವರ ಬಗ್ಯೆ ತೆರೆಸಾ ಲೋಬೊ ನುಡಿನಮನ ಸಲ್ಲಿಸಿ, ಬಳಿಕ ಮಿನೆಜಸ್ ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಕಾರ್ಯದರ್ಶಿ ಶ್ರೀ ವಿಶ್ವಾಸ ರಾವ್ ಗತ ಸಭೆಯ ವರದಿ ಸಾದರಪಡಿಸಿದರು. ವಸಂತ ಸುವರ್ಣ ಧನ್ಯವಾದವಿತ್ತರು.