ಸೇವಾಭಾರತಿ ಸಂಸ್ಥೆಯು 2004 ರಲ್ಲಿ ಸ್ಥಾಪಿತವಾದ ಸರ್ಕಾರೇತರ ಸಂಸ್ಥೆಯಾಗಿದ್ದು ಕಳೆದ 19 ವರ್ಷಗಳಿಂದ ಆರೋಗ್ಯ, ಮಹಿಳಾಸಬಲೀಕರಣ ಸ್ವ-ಉದ್ಯೋಗದ ಮೂಲಕ ದಿವ್ಯಾಂಗರ ಕ್ಷೇತ್ರದಲ್ಲಿ ಸಾಮಾಜಿಕ ಸೇವಾಕಾರ್ಯ ಹಾಗೂ ಸಮುದಾಯ ಸೇವೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುತ್ತದೆ. ಆರೋಗ್ಯಂ ಯೋಜನೆಯಡಿ ರಕ್ತದಾನ ಶಿಬಿರಗಳನ್ನು ಹಾಗೂ ರಿಯಾಯಿತಿ ದರದಲ್ಲಿ ಆಂಬ್ಯುಲೆನ್ಸ್ ಸೇವೆಗಳನ್ನು ನೀಡುತ್ತದೆ. ಸಬಲಿನಿ ಯೋಜನೆಯಡಿ ಗ್ರಾಮೀಣ ಮಹಿಳೆಯರಿಗೆ ಉಚಿತ ಟೈಲರಿಂಗ್ ತರಬೇತಿ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಸೇವಾಧಾಮ ಎಂಬ ಹೆಸರಿನಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದವರಿಗೆ ಪುನಶ್ವೇತನ ಕೇಂದ್ರವನ್ನು 2018 ರಲ್ಲಿ ಪ್ರಾರಂಭಿಸಿ, ಪುನಶ್ವೇತನ ನೀಡುವ ಕಾರ್ಯ ನಿರಂತರವಾಗಿ ನಮ್ಮ ಸಂಸ್ಥೆಯಿಂದ ಮುಂದುವರೆಯುತ್ತಿದೆ. ನಮ್ಮ ಸಂಸ್ಥೆಯು 2023-24 ರಲ್ಲಿ 94 ಮಂದಿ ಬೆನ್ನುಹುರಿ ಅಪಘಾತಕ್ಕೊಳಗಾದವರನ್ನು ಗುರುತಿಸಿ, 40 ಮಂದಿ ದಿವ್ಯಾಂಗರನ್ನು ಪುನಶ್ಚೇತನಗೊಳಿಸಲಾಗಿದೆ. 81 ಮಂದಿಗೆ ಗಾಲಿಕುರ್ಚಿ, ಹಾಗೂ 20 ಮಂದಿಗೆ ಜೀವನೋಪಾಯ ಸೌಲಭ್ಯಗಳನ್ನು ನೀಡಲಾಗಿದೆ.
ಸೇವಾಧಾಮದ ಮೂಲಕ 6 ಜಿಲ್ಲೆಗಳಲ್ಲಿ (ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ, ಕೊಡಗು, ಹಾಸನ) ಬೆನ್ನುಹುರಿ ಅಪಘಾತಕ್ಕೊಳಗಾದಗಾದವರಿಗೆ ಸೇವೆ ನೀಡುತಿದ್ದು ಅವರನ್ನು ಪುನಶ್ವೇತನ ಮಾಡುವ ಕಾರ್ಯ ನಿರಂತರವಾಗಿದೆ. ನಮ್ಮ ಸೇವಾಭಾರತಿ ಸಂಸ್ಥೆಯು 20 ವರ್ಷಗಳ ಸಾರ್ಥಕ ಸೇವೆಯನ್ನು ಪೂರೈಸಿ 21ನೇ ವರ್ಷಕ್ಕೆ ಪಾದಾರ್ಪಣೆ ಮಾಡುವ ಸುಸಂದರ್ಭದಲ್ಲಿ ಸಾಧನ ಸಲಕರಣೆಗಳ ವಿತರಣೆ ಸಾಧಕರಿಗೆ ಗೌರವ ಸಮರ್ಪಣೆ ಮತ್ತು ನೂತನ ಟ್ರಸ್ಟಿಗಳ ಸೇರ್ಪಡೆ ಹಾಗೂ ರಕ್ತ ದಾನ ಶಿಬಿರವನ್ನು ಆದಿತ್ಯವಾರ ಮಾರ್ಚ್ 16 ರಂದು ಬೆಳಿಗ್ಗೆ 11.00 ಗಂಟೆಗೆ ಸೇವಾಧಾಮ ಪುನಶ್ವೇತನ ಕೇಂದ್ರ ಸೌತಡ್ಕದಲ್ಲಿ ಹಮ್ಮಿಕೊಂಡಿದ್ದೇವೆ.
ಸೇವಾಧಾಮ ಪುನಶ್ಚೇತನ ಕೇಂದ್ರದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಮಂಗಳೂರು ಸಹಕಾರದಲ್ಲಿ ಶಿವಾಜಿ ಗ್ರೂಪ್ ಆಫ್ ಬಾಯ್ಸ್ ಕೊಕ್ಕಡ, ವೀರಕೇಸರಿ ಅನಾರು ಪಟ್ರಮೆ ಕೇಸರಿ ಗೆಳೆಯರ ಬಳಗ ಕೊಕ್ಕಡ ಹವ್ಯಕ ವಲಯ, ಉಜಿರೆ ಇವುಗಳ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರವನ್ನು ಮಾರ್ಚ್ 16 ರಂದು ಬೆಳಿಗ್ಗೆ 10.00 ಗಂಟೆಗೆ ಸೇವಾಧಾಮ ಪುನಶ್ಚತನ ಕೇಂದ್ರ ಸೌತಡ್ಕದಲ್ಲಿ ಹಮ್ಮಿಕೊಳ್ಳಲಾಗಿದೆ.
ಶಿಬಿರವನ್ನು ಕೊಕ್ಕಡ ಶ್ರೀ ರಾಮ ಸೇವಾ ಸಮಿತಿಯ ಅಧ್ಯಕ್ಷರಾದ ಬಾಲಕೃಷ್ಣ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಉಜಿರೆ ಹವ್ಯಕ ವಲಯ ಉಪಾಧ್ಯಕ್ಷರಾದ ಶಿವರಾಮ ಭಟ್ ಹಿತ್ತಿಲು. ಕೊಕ್ಕಡ ಶಿವಾಜಿ ಗ್ರೂಪ್ ಆಫ್ ಬಾಯ್ಸ್ ಅಧ್ಯಕ್ಷರಾದ ಕಿಶೋರ್ ಪೊಯ್ಯೊಳೆ. ಅನಾರು ಪಟ್ರಮೆ ವೀರಕೇಸರಿ ಅಧ್ಯಕ್ಷರಾದ ಮೋಹನ್ ಅಶ್ವತ್ತಡಿ. ಕೊಕ್ಕಡ ಕೇಸರಿ ಗೆಳೆಯರ ಬಳಗ ಅಧ್ಯಕ್ಷರಾದ ಶರತ್ ಕೊಕ್ಕಡ, ಮಂಗಳೂರು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಡಿಸ್ಟ್ರಿಕ್ಟ್ ಕೋ-ಆರ್ಡಿನೇಟರ್ ಪ್ರವೀಣ್ ಕುಮಾರ್ ಹಾಗೂ ಸಂಸ್ಥೆಯ ಪ್ರಮುಖರು ಉಪಸ್ಥಿತರಿರುತ್ತಾರೆ.
20 ನೇ ವಾರ್ಷಿಕ ಸಂಭ್ರಮ ಕಾರ್ಯಕ್ರಮವನ್ನು ಉಡುಪಿ ರಾ ಸ್ವ ಸಂಘ ಪ್ರಚಾರಕರು ದಾ. ಮ. ರವೀಂದ್ರ ಜೇಷ್ಠ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸೇವಾಭಾರತಿ ಅಧ್ಯಕ್ಷರಾದ ಸ್ವರ್ಣಗೌರಿ, ಬೆಳ್ತಂಗಡಿ ಸಮಾಜ ಸೇವಕರು ಶ್ರೀ ಕಿರಣ್ ಚಂದ್ರ ಡಿ ಪುಷ್ಪಗಿರಿ, ಗುರುವಾಯನಕರೆ ಎಕ್ಸೆಲ್ ಪದವಿಪೂರ್ವ ಕಾಲೇಜ್ ಅಧ್ಯಕ್ಷರಾದ ಸುಮಂತ್ ಕುಮಾರ್ ಬಿ. ಜೈನ್, ಉಡುಪಿ ಭಾರತ ವಿಕಾಸ ಪರಿಷತ್ ಭಾರ್ಗವ ಶಾಖೆಯ ಸಂಯೋಜಕರು ಮತ್ತು ಕಡಿಯಾಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ವಸಂತ ಭಟ್, ಕೃಷಿಕರು ಕನ್ಯಾಡಿ II ಅರುಣ ಜೆ ಎನ್ ರೆಬೆಲ್ಲೊ, ಉಡುಪಿ ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್ ಗುರುಪ್ರಕಾಶ್ ಶೆಟ್ಟಿ, ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ(ನಿ) ಅಧ್ಯಕ್ಷರಾದ ಕುಶಾಲಪ್ಪ ಗೌಡ ಪೂವಾಜೆ, ಕೊಕ್ಕಡ ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ (ರಿ) ಅಧ್ಯಕ್ಷರಾದ ಕೆ. ಕೃಷ್ಣ ಭಟ್ ಹಾಗೂ ಸಂಸ್ಥೆಯ ಪ್ರಮುಖರು ಮಾರ್ಚ್ 16 ವಾರ್ಷಿಕೋತ್ಸವದಂದು ನಮ್ಮೊಂದಿಗೆ ಉಪಸ್ಥಿತರಿರುತ್ತಾರೆ.
ಶ್ರೀ ಆದಿತ್ಯ ಕಲ್ಲೂರಾಯ ಇವರು ಸ್ವತಃ ಬೆನ್ನುಹುರಿ ಅಪಘಾತಕ್ಕೊಳಗಾದ ವ್ಯಕ್ತಿಯಾಗಿದ್ದು ಸುಮಾರು 30 ಮಂದಿಗೆ ದಿ ವೆಬ್ ಪೀಪಲ್ ಕಂಪನಿಯ ಮೂಲಕ ಉದ್ಯೋಗ ಭದ್ರತೆಯನ್ನು ಒದಗಿಸಿದ ದಿವ್ಯಾಂಗರಾಗಿ ಸನ್ಮಾನಗೊಳ್ಳಲಿದ್ದಾರೆ ಮತ್ತು ನೂತನ ಟ್ರಸ್ಟಿಗಳ ಸೇರ್ಪಡೆ ನಡೆಯಲಿದೆ.