ಚೆನ್ನೈ: ಸಾಮಾನ್ಯವಾಗಿ ಹುಡುಗಿಯರು ಅಮ್ಮನಿಗಿಂತಲೂ ಹೆಚ್ಚಾಗಿ ಅಪ್ಪನನ್ನು ನಂಬುತ್ತಾರೆ. ತಮಗಾಗುವ ಕಷ್ಟಗಳನ್ನು ಅಪ್ಪನಲ್ಲಿ ಹೇಳಿಕೊಳ್ಳುತ್ತಾರೆ. ತಮಗೆ ಬೇಕಾದುದನ್ನೂ ಅಪ್ಪನಿಂದ ಪಡೆಯುತ್ತಾರೆ. ಆದರೆ ಮಗಳ ಬೇಕು, ಬೇಡಗಳನ್ನು ಕೇಳಬೇಕಾದ ಅಪ್ಪನೇ ಮಗಳ ಮೇಲೆ ಕೆಟ್ಟ ದೃಷ್ಟಿ ನೆಟ್ಟರೆ ಏನಾಗಬೇಡ?. ಇಲ್ಲೊಂದು ಐದು ವರ್ಷದ ಹೆಣ್ಣು ಮಗುವಿಗೆ ಆಕೆಯ ತಂದೆಯೇ ಲೈಂಗಿಕ ಕಿರುಕುಳ ನೀಡುತ್ತಿರುವ ಘಟನೆ ಬೆಳಕಿಗೆ ಬಂದಿದೆ. ತಮಿಳುನಾಡಿನ ತಾಂಬರಂನಲ್ಲಿ ತಂದೆಯೇ ಮಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಘಟನೆ ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಪಶ್ಚಿಮ ತಾಂಬರಂನ ಪಟೇಲ್ ನಗರದ ನಿವಾಸಿ, ಎಲೆಕ್ಟ್ರಿಶಿಯನ್ ಸೌಂದರರಾಜನ್ (37) ಎಂಬಾತ ಬಂಧನಕ್ಕೊಳಪಟ್ಟಿದ್ದಾರೆ.
ಸೌಂದರರಾಜನ್‌ಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಹಿರಿಯವಳು ಏಳು ವರ್ಷದವಳು ಮತ್ತು ಕಿರಿಯವಳು ಐದು ವರ್ಷದವಳು. ಒಂದನೇ ತರಗತಿ ಓದುತ್ತಿರುವ ಮಗಳ ಮೇಲೆ ತಂದೆ ಲೈಂಗಿಕ ದೌರ್ಜನ್ಯ ಎಸಗುತ್ತಿರುವುದನ್ನು ಮಗುವಿನ ತಾಯಿ ಗಮನಿಸಿದ್ದಾಳೆ. ಸ್ನಾನಕ್ಕೆ ಕರೆದುಕೊಂಡು ಹೋಗುವಾಗ ಸೌಂದರರಾಜನ್ ತಪ್ಪು ಮಾಡುತ್ತಿದ್ದುದನ್ನು ಆತನ ಪತ್ನಿ ಗಮನಿಸಿ, ಅನುಮಾನಗೊಂಡು ಮಗಳಲ್ಲಿ ವಿಚಾರಿಸಿದ್ದಾಳೆ. ಆ ವೇಳೆ ಮಗಳು ನಡೆದಿದ್ದನ್ನು ಹೇಳಿದ್ದಾಳೆ. ಬಳಿಕ ಪತ್ನಿ ಮಹಿಳಾ ಠಾಣೆಗೆ ದೂರು ನಡೆದಿದ್ದಾಳೆ. ಈ ದೂರಿನ ಆಧಾರದಲ್ಲಿ ತಲೆ ಮರೆಸಿಕೊಂಡಿದ್ದ ಸೌಂದರರಾಜನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.