ಬೆಂಗಳೂರು: ಜೆಡಿಎಸ್ ಹಿರಿಯ ನಾಯಕ, ಶಾಸಕ ಎಚ್.ಡಿ. ರೇವಣ್ಣರ ಪುತ್ರ, ಹಾಸನದ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದ್ದು, ಈ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡ ತನ್ನ ತನಿಖೆ ಆರಂಭಿಸಿದೆ.
ಸಂತ್ರಸ್ತೆಯರಲ್ಲಿಒಬ್ಬರು ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ ಬೆನ್ನಲ್ಲೇ ಪ್ರಕರಣ ತೀವ್ರತೆ ಪಡೆದುಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿ ಸಂಸದನ ಲೈಂಗಿಕ ಕಿರುಕುಳದ ಅಶ್ಲೀಲ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಎಡಿಜಿಪಿ-ಸಿಐಡಿ ಬಿಜಯ್ ಕುಮಾರ್ ಸಿಂಗ್ ನೇತೃತ್ವದಲ್ಲಿ ಹೆಚ್ಚುವರಿ ಕಮಿಷನರ್ ಡಿ. ಪೆನ್ನೇಕರ್ ಮತ್ತು ಮೈಸೂರು ಎಸ್ಪಿ ಸೀಮಾ ಲಾಟ್ಕರ್ ಅವರನ್ನೊಳಗೊಂಡ ಎಸ್ ಐಟಿ ತನಿಖೆ ಆರಂಭಿಸಿದೆ.
ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಮೇಲೆ ರೇವಣ್ಣ ಮತ್ತು ಪ್ರಜ್ವಲ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರು ನೀಡಲಾಗಿದೆ. ಸುಮಾರು 2,876 ಮಹಿಳೆಯರ ಮೇಲೆ ಪ್ರಜ್ವಲ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಸ್ಮಿ ಚೌಧರಿ ಹೇಳಿದ್ದು, ಈ ಸಂಬಂಧ ತಮ್ಮ ವಾಟ್ಸಾಪ್ ಖಾತೆಯಲ್ಲಿ ದೂರನ್ನು ಸ್ವೀಕರಿಸಿರುವುದಾಗಿ ತಿಳಿಸಿದ್ದಾರೆ.
ಈ ನಡುವೆ ಎಸ್ ಐಟಿ ತನಿಖೆಗೆ ನೀಡಿದ ಬಳಿಕ ಪ್ರಜ್ವಲ್ ರೇವಣ್ಣ ಪ್ರತಿದೂರು ನೀಡಿದ್ದಾರೆ. ಬೇಲೂರಿನ ನವೀನ್ ಗೌಡ ಎಂಬವರ ವಿರುದ್ಧ ಅವರು ದೂರು ದಾಖಲಿಸಿದ್ದಾರೆ. ವಿಡಿಯೋ ಸೃಷ್ಟಿಸಲಾಗಿದ್ದು, ಚುನಾವಣೆ ವೇಳೆ ನನ್ನ ವರ್ಚಸ್ಸಿಗೆ ಧಕ್ಕೆ ತರಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಅವರು ದೂರಿದ್ದಾರೆ.