ದಾವಣಗೆರೆ : ಜನಪದ, ಹಿಂದೂಸ್ತಾನಿ, ವಚನ ಗಾಯನ, ಕರ್ನಾಟಕ ಸಂಗೀತ, ಭಾವಗೀತೆ, ಭಕ್ತಿಗೀತೆ ಸುಗಮ ಸಂಗೀತ ಚಟುವಟಿಕೆಗಳಿಂದ ಮಾನವನ ಖಿನ್ನತೆಯ ಮನಸ್ಸುಗಳನ್ನು ಪುಳಕಿತಗೊಳಿಸುವ ಶಕ್ತಿ ಸಂಗೀತ ಪರಂಪರೆ. ಉದ್ಯೋಗ ಹೊರತಪಡಿಸಿ ಕೆಲವು ಮಹಿಳೆಯರು, ನಾಲ್ಕು ಗೋಡೆ ನಡುವೆ ಅಡಿಗೆ ಮನೆಗೆ ಸೀಮಿತವಾಗದೇ ಈ ಸಾಂಸ್ಕೃತಿಕ, ಸಂಗೀತ ಚಟುವಟಿಕೆಗಳಿಂದ ಅನಾರೋಗ್ಯಕ್ಕೆ ಮಾನಸಿಕ ಚಿಂತೆಗಳಿಗೆ ಇದೇ
ದಿವ್ಯ ಭವ್ಯ ಔಷಧಿ ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್‌ನ ಜಿಲ್ಲಾ ಅಧ್ಯಕ್ಷರಾದ ಸಾಲಿಗ್ರಾಮ ಗಣೇಶ್‌ಶೆಣೈ ತಮ್ಮ ಮನದಾಳದ ಮಾತು ಹಂಚಿಕೊಂಡರು. ಕರ್ನಾಟಕ ಸುಗಮ ಸಂಗೀತ ಪರಿಷತ್‌ನ ಹರಿಹರ ತಾಲ್ಲೂಕು ಘಟಕದ ಆಶ್ರಯದಲ್ಲಿ ಇತ್ತೀಚಿಗೆ ಹರಿಹರದ ಮುಖ್ಯ ರಸ್ತೆಯಲ್ಲಿರುವ ಗಿರಿಯಮ್ಮ ಕಾಂತಪ್ಪ ಶ್ರೇಷ್ಠಿ ಪ್ರೌಢಶಾಲಾ ಸಭಾಂಗಣದಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾದ ರಾಜ್ಯ ಮಟ್ಟದಲ್ಲಿ ಅಂತರ್ಜಾಲ ತಾಣದಲ್ಲಿ ಉಚಿತವಾಗಿ ಸಮೂಹ ದೇಶಭಕ್ತಿ ಗೀತೆಗಳ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣಾ ಸಮಾರಂಭವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಶೆಣೈಯರು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಸುಗಮ ಸಂಗೀತ ಪರಿಷತ್‌ನ ಹರಿಹರ ತಾಲ್ಲೂಕು ಘಟಕದ ಅಧ್ಯಕ್ಷರಾದ ಮಾಧುರಿ ಶೇಷಗಿರಿಯವರು ಮಾತನಾಡಿ, ಮಕ್ಕಳು ಶಿಕ್ಷಣದ ಜತೆಯಲ್ಲಿ ಸಂಗೀತವನ್ನು ಅಳವಡಿಸಿಕೊಂಡರೆ ವಿದ್ಯಾಭಾಸಕ್ಕೆ ಪರಿಪೂರ್ಣತೆ ಬರುತ್ತದೆ. ಹಾಡಿನ ಜತೆಯಲ್ಲಿ ಭಾವ, ರಾಗ, ತಾಳ,
ಶೃತಿಗಳ ಪರಿಜ್ಞಾನದೊಂದಿಗೆ ರೂಢಿಸಕೊಳ್ಳಬೇಕಾದ ಅಗತ್ಯವಿದೆ ಎಂದರು.
ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಪರಿಷತ್‌ನ ಗೌರವಾಧ್ಯಕ್ಷರಾದ ಶಿವಕುಮಾರ ಬಿ.ಕರಡಿ, ಕಲಾ ಪೋಷಕರಾದ ಪಿ.ಶ್ರೀನಿವಾಸಮೂರ್ತಿ, ಹರಿಹರ ಮಹಿಳಾ ಸಮಾಜದ ಅಧ್ಯಕ್ಷರಾದ ಉಮಾ ಕೆ.ಎ. ಪರಿಷತ್ತಿನ ಉಪಾಧ್ಯಕ್ಷರಾದ ಸುಮನ್ ಖಮಿತ್ಕರ್ ಮುಂತಾದವರು ಮಾತನಾಡಿ, ಸಂಗೀತ ಕೇವಲ ಮನರಂಜನೆಗೆ ಸೀಮಿತವಾಗದೇ ಎದೆ ತುಂಬಿ ಹಾಡಿದಾಗ ಮಾನಸಿಕವಾಗಿ ಮಾನವನ ಜೀವನಕ್ಕೆ ಸಾರ್ಥಕತೆ ಬರುತ್ತದೆ ಎಂದು ಹೇಳುತ್ತಾ ಬಹುಮಾನ ವಿಜೇತರಾದ ಹಿರಿಯ, ಕಿರಿಯ ತಂಡಗಳಿಗೆ ಶುಭ ಹಾರೈಸಿದರು.
76ನೇ ಗಣರಾಜ್ಯೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾದ ರಾಜ್ಯ ಮಟ್ಟದ ದೇಶ ಭಕ್ತಿಗೀತೆಗಳಲ್ಲಿ ಭಾಗವಹಿಸಿದ ಬಹುಮಾನ ವಿಜೇತರಾದ ಹಿರಿಯರಿಗೆ, ಕಿರಿಯರಿಗೆ, ಬಹುಮಾನ ಹಾಗೂ ಅಭಿನಂದನಾ ಪತ್ರ ವಿತರಿಸಲಾಯಿತು. ಪ್ರೇಮಾ ಕೆ.ಎಂ. ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭಕ್ಕೆ ಗಿರಿಜಾ ಎಸ್.ಎನ್.ಸ್ವಾಗತಿಸಿದರು. ಕೊಟ್ರೇಶಪ್ಪ ವಿ.ಬಿ. ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ರಮ್ಯ ಕೆ.ಎಂ. ವಂದಿಸಿದರು.