ಬಂಟ್ವಾಳ:ಕಳೆದ ಎರಡು ವಾರಗಳ ಹಿಂದೆ ಜೋಗ ಜಪಲಪಾತ ವೀಕ್ಷಿಸಲು ಪ್ರವಾಸಕ್ಕೆ ತೆರಳಿದ್ದ ಬಸ್ ಉರುಳಿ ಬಿದ್ದು ಗಂಭೀರ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಸಂಜೆ ಸಾವನ್ನಪ್ಪಿದ್ದಾರೆ.
ಶಂಭೂರು ಮುಂಡಜೋರ ನಿವಾಸಿ ಗಂಗಾಧರ ಪೂಜಾರಿ ಇವರ ಪತ್ನಿ ಭಾರತಿ ಪೂಜಾರಿ (೫೫) ಮೃತ ಮಹಿಳೆ.
ಇಲ್ಲಿನ ಶಂಭೂರು ಶ್ರೀ ಸಾಯಿ ಮಂದಿರದಿAದ ಸುಮಾರು ೫೩ ಮಂದಿ ಡಿ.೧೫ ರಂದು ಖಾಸಗಿ ಬಸ್ಸಿನಲ್ಲಿ ಜೋಗ ಜಲಪಾತಕ್ಕೆ ತೆರಳಿದ್ದರು.
ಅಂದು ಮಧ್ಯಾಹ್ನ ಜೋಗ ಜಲಪಾತ ಸ್ಥಳ ತಲುಪುವ ಮೊದಲೇ ಸ್ವಲ್ಪ ದೂರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ರಸ್ತೆಯಲ್ಲಿ ಉರುಳಿ ಬಿದ್ದಿತ್ತು. ಇದರಿಂದಾಗಿ ಸುಮಾರು ೨೦ ಕ್ಕೂ ಮಿಕ್ಕಿ ಮಂದಿ ಗಾಯಗೊಂಡ ಹಿನ್ನೆಲೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರ ಸಲಹೆಯಂತೆ ಅಲ್ಲಿನ ಸಾಗರದ ಆಸ್ಪತ್ರೆಯೊಂದರಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ರಾತ್ರಿಯೇ ಮಂಗಳೂರಿನ ಎ.ಜೆ.ಆಸ್ಪತ್ರೆಗೆ ಕರೆತರಲಾಗಿತ್ತು. ಈ ಪೈಕಿ ೧೫ ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದರೆ, ಭಾರತಿ ಅವರು ಚಿಕಿತ್ಸೆ ಫಲಕಾರಿಯಾಗಿದೆ ಸೋಮವಾರ ಸಂಜೆ ಸಾವಿಗೀಡಾಗಿದ್ದಾರೆ. ಇವರ ಪುತ್ರಿ
ದೀಕ್ಷಿತಾ ಅವರಿಗೂ ಕೈಗೆ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಲಗೈ ಕಳೆದು ಕೊಂಡ ಗ್ರಾ.ಪಂ.ಮಾಜಿ ಅಧ್ಯಕ್ಷೆ
ಈ ಅಪಘಾತದಿಂದ ಕೈ ತುಂಡಾಗಿ ನಾಲ್ಕು ಗಂಟೆಗಳ ಬಳಿಕ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗಾಯಾಳು ನರಿಕೊಂಬು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋಧ ಇವರು ಬಲಗೈ ಕಳೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಈ ಬಸ್ ಉರುಳಿ ಬಿದ್ದ ರಭಸಕ್ಕೆ ಬಸ್ಸಿನಲ್ಲೇ ಇವರ ಬಲ ಕೈ ದೇಹದಿಂದ ತುಂಡಾಗಿ ಬೇರ್ಪಟ್ಟಿದ್ದು, ತಕ್ಷಣವೇ ಅಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಬದಲಾಗಿ ಇವರನ್ನು ಕೂಡಾ ಮಂಗಳೂರಿನ ಆಸ್ಪತ್ರೆಗೆ ಕರೆ ತರಲಾಗಿತ್ತು. ಇವರನ್ನು ಕೈ ತುಂಡಾಗಿ ಸುಮಾರು ನಾಲ್ಕು ಗಂಟೆಗಳ ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸುವ ಮೂಲಕ ಕೈಗೊಂಡ ತಪ್ಪು ನಿರ್ಧಾರದಿಂದ ಅವರ ಕೈ ಮರು ಜೋಡಣೆಗೆ ಸಾಧ್ಯವಾಗಿಲ್ಲ ಎಂಬ ಆರೋಪವೂ ಸ್ಥಳೀಯರಿಂದ ಕೇಳಿ ಬಂದಿದೆ.