Saturday, April 26, 2025
Homeಮಂಗಳೂರುಹೊಸಬೆಟ್ಟಿನಲ್ಲಿ ಶಾರದಾ ಮಾಸದ ಕೂಟತಾಳಮದ್ದಳೆಯ ಗತಕಾಲದ ಇತಿಹಾಸ ಅನಾವರಣ

ಹೊಸಬೆಟ್ಟಿನಲ್ಲಿ ಶಾರದಾ ಮಾಸದ ಕೂಟ
ತಾಳಮದ್ದಳೆಯ ಗತಕಾಲದ ಇತಿಹಾಸ ಅನಾವರಣ

ಮಂಗಳೂರು: ‘ಯಕ್ಷಗಾನ ತಾಳ ಮುದ್ದಳೆ ಕಾರ್ಯಕ್ರಮಗಳು ಅಹೋರಾತ್ರಿ ನಡೆಯುತ್ತಿದ್ದ ಕಾಲವೊಂದಿತ್ತು. ಈಗಿನ ಯುವ ಸಮುದಾಯಕ್ಕೆ ಅದರ ಕಲ್ಪನೆಯೂ ಇರಲಾರದು. ಆದರೆ ವಿನಯ ಆಚಾರ್ಯರ ನೇತೃತ್ವದಲ್ಲಿ ನಡೆದ ವಿಶಿಷ್ಟ ಪರಿಕಲ್ಪನೆಯ ಶಾರದಾ ಮಾಸದ ಕೂಟವು ತಾಳಮದ್ದಳೆಯ ಗತಕಾಲದ ಇತಿಹಾಸವು ಮರುಕಳಿಸುವಂತೆ ಮಾಡಿದೆ’ ಎಂದು ಕರ್ನಾಟಕ ಜಾನಪದ,ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.

ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಕಾರದೊಂದಿಗೆ ಸುರತ್ಕಲ್ ಸಮೀಪ ಹೊಸಬೆಟ್ಟು ಮಾರುತಿ ಬಡಾವಣೆಯ ಶಾರದಾ ಮಂದಿರದಲ್ಲಿ ಇಡೀ ರಾತ್ರಿ ನಡೆದ ಶಾರದಾ ಮಾಸದ ಕೂಟದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಯಕ್ಷಗಾನ ಹಿಮ್ಮೇಳ ವಾದನಗಳ ನುಡಿತದೊಂದಿಗೆ ಜರಗಿದ ಉದ್ಘಾಟನೆಯನ್ನು ಹಿರಿಯ ವಿದ್ವಾಂಸ ಹೊಸಬೆಟ್ಟು ಗುರುರಾಜ ಆಚಾರ್ಯ ಜಾಗಟೆ ಬಾರಿಸುವುದರ ಮೂಲಕ ನೆರವೇರಿಸಿದರು.

ಯಕ್ಷಗುರು ಶಂಕರನಾರಾಯಣ ಮೈರ್ಪಾಡಿ, ಕರ್ಣಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ರಾಜೇಶ ಕುಳಾಯಿ, ಉಜ್ವಲ್ ಎಂ. ಕೆ. ಅತಿಥಿಗಳಾಗಿ ಪಾಲ್ಗೊಂಡರು. ಕಾರ್ಯಕ್ರಮದ ಸಂಘಟಕರಾದ ವಿನಯ ಆಚಾರ್ಯ ಹೊಸಬೆಟ್ಟು ಸ್ವಾಗತಿಸಿ ನಿರೂಪಿಸಿದರು. ದಕ್ಷ ಯಜ್ಞ : ಉದ್ಘಾಟನೆ ಬಳಿಕ ಜರಗಿದ ಮೊದಲ ತಾಳಮದ್ದಳೆ ‘ದಕ್ಷಯಜ್ಞ’ ಪ್ರಸಂಗದಲ್ಲಿ ಭಾಸ್ಕರ ರೈ ಕುಕ್ಕುವಳ್ಳಿ (ಈಶ್ವರ), ಉಮೇಶ ನೀಲಾವರ (ದೇವೇಂದ್ರ), ಮನೋಹರ ಕುಂದರ್ (ದಕ್ಷ), ಸುಬ್ರಹ್ಮಣ್ಯ ಬೈಪಾಡಿತ್ತಾಯ (ಬ್ರಾಹ್ಮಣ), ಸುಮಂಗಳಾ ರತ್ನಾಕರ (ದಾಕ್ಷಾಯಿಣಿ), ಗಾಯತ್ರಿ ಬಿ.ಎಸ್. (ನಾರದ), ನಳಿನಿ ಮೋಹನ್ (ವೀರಭದ್ರ) ಅರ್ಥಧಾರಿಗಳಾಗಿದ್ದರು. ವೀರಮಣಿ ಕಾಳಗ: ಎರಡನೇ ಪ್ರಸಂಗ ‘ವೀರಮಣಿ ಕಾಳಗ’. ಶ್ರೀಧರ ಎಸ್.ಪಿ. (ಶತ್ರುಘ್ನ), ಗೋಪಾಲಕೃಷ್ಣ ಅನಂತಾಡಿ (ಹನೂಮಂತ), ಪ್ರಶಾಂತ ಕುಮಾರ (ವೀರಮಣಿ), ಜಯರಾಮ ದೇವಸ್ಯ (ಈಶ್ವರ), ರವಿಕುಮಾರ್ ಬಿ. (ಶ್ರೀರಾಮ) ಕಲಾವಿದರಾಗಿದ್ದರು. ಶಾಂಭವಿ ವಿಜಯ: ಬೆಳಗ್ಗಿನ ಜಾವ ನಡೆದ ‘ಶಾಂಭವಿ ವಿಜಯ’ ಯಕ್ಷಗಾನ ಕೂಟದಲ್ಲಿ ವಿನೋದ ಆಚಾರ್ಯ (ದೆವೇಂದ್ರ), ಮನೋಹರ ಕುಂದರ್ (ಶುಂಭ), ಚಂದ್ರಶೇಖರ ಕೊಡಿಪಾಡಿ (ಶಾಂಭವಿ), ಸುಬ್ರಮಣ್ಯ ಬೈಪಾಡಿತ್ತಾಯ (ಸುಗ್ರೀವ), ಉಮೇಶ ನೀಲಾವರ (ಧೂಮ್ರಾಕ್ಷ), ವಿನಯ ಆಚಾರ್ಯ ಹೊಸಬೆಟ್ಟು (ರಕ್ತಬೀಜ) ಪಾತ್ರಧಾರಿಗಳಾಗಿ ಭಾಗವಹಿಸಿದರು.

ರಾತ್ರಿ ಗಂ.9.30 ಕ್ಕೆ ಆರಂಭವಾದ ತಾಳಮದ್ದಳೆ ಕೂಟದಲ್ಲಿ ಶಶಿಧರ ರಾವ್, ರಾಮ ಹೊಳ್ಳ, ಗಣೇಶ ಮಯ್ಯ, ವಾಸುದೇವ ಮಯ್ಯ, ಮಾಧವ ಮಯ್ಯ, ಎಸ್. ಎನ್. ಭಟ್ ಬಾಯಾರು, ವೇದವ್ಯಾಸ ರಾವ್, ಲಕ್ಷ್ಮೀಶ್ ಉಪಾಧ್ಯಾಯ, ರಾಘವೇಂದ್ರ ಹೆಜಮಾಡಿ, ಹರೀಶ ಹೆಬ್ಬಾರ್, ಸ್ಕಂದ ಮಯ್ಯ ಮೊದಲಾದವರು ಮರುದಿನ ಮುಂಜಾನೆ ವರೆಗೆ ಸಮಗ್ರ ಹಿಮ್ಮೇಳದಲ್ಲಿದ್ದು ಸಹಕರಿಸಿದರು.

RELATED ARTICLES
- Advertisment -
Google search engine

Most Popular