ತುಮಕೂರು: ರಸ್ತೆಗೆ ಹಾಕುವ ಡಾಂಬರ್ ಸುರಿದಿದ್ದ ಗುಂಡಿಗೆ ಬಿದಿದ್ದ ಕುರಿಗಳ ರಕ್ಷಣೆ ಮಾಡಲು ಹೋದ ಕುರಿಗಾಯಿ ಆಯ ತಪ್ಪಿ, ಗುಂಡಿಗೆ ಬಿದ್ದಿದ್ದು, ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ. ತುಮಕೂರು ತಾಲ್ಲೂಕಿನ ಹಿರೇಹಳ್ಳಿ ಬಳಿಯ ಮಂದಾರಗಿರಿ ಬೆಟ್ಟದ ಪಕ್ಕದಲ್ಲಿ ಈ ಘಟನೆ ನಡೆದಿದೆ. ಮೈತುಂಬಾ ಡಾಂಬರ್ ಮೆತ್ತಿಕೊಂಡಿದ್ದ ಕುರಿಗಾಯಿಯನ್ನು ಎನ್‌ಸಿಸಿ ಬೆಟಾಲಿಯನ್ ಕ್ಯಾಂಪ್ ತಂಡದ ಸದಸ್ಯರು ರಕ್ಷಿಸಿದ್ದಾರೆ. ಎನ್‌ಸಿಸಿ ಬೆಟಾಲಿಯನ್ ಸದಸ್ಯರ ಸಮಯ ಪ್ರಜ್ಞೆಯಿಂದ ಬದುಕುಳಿದ ಕುರಿಗಾಯಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಮಂದಾರಗಿರಿ ಬೆಟ್ಟದ ಬಳಿ ಕುರಿ ಮೇಯಿಸಲು ಕುರಿಗಾಯಿ ತೆರಳಿದ್ದರು. ಈ ವೇಳೆ ರಸ್ತೆಗೆ ಹಾಕುವ ಡಾಂಬರ್ ಸುರಿದಿದ್ದ ಗುಂಡಿಗೆ ಸುಮಾರು ಏಳೆಂಟು ಕುರಿಗಳು ಬಿದಿದ್ದವು. ಅವುಗಳನ್ನು ರಕ್ಷಿಸುವ ಭರದಲ್ಲಿ ಆಯತಪ್ಪಿ ಡಾಂಬರ್ ಗುಂಡಿಗೆ ತಾನೇ ಬಿದ್ದು ಪ್ರಾಣಕ್ಕೆ ಅಪಾಯ ತಂದುಕೊಂಡಿದ್ದರು.
ಸುಮಾರು ಎರಡು ಗಂಟೆಗಳ ಕಾಲ ಡಾಂಬರ್ ಗುಂಡಿಯಲ್ಲೇ ಕುರಿಗಾಯಿ ಬಿದಿದ್ದು, ಅದೇ ಸಮಯಕ್ಕೆ ಎನ್ ಸಿಸಿ ಕ್ಯಾಂಪ್ಗೆ ತೆರಳಿದ್ದ ತಂಡ ಫೈರಿಂಗ್ ತರಬೇತಿ ಪಡೆಯುವ ವೇಳೆ ಕುರಿಗಾಯಿಯನ್ನು ಗಮನಿಸಿದ್ದಾರೆ. ಕೂಡಲೇ ಅವರನ್ನು ಗುಂಡಿಯಿಂದ ಮೇಲಕ್ಕೆ ಎತ್ತಿ ರಕ್ಷಿಸಿದ್ದಾರೆ.
ತುಮಕೂರಿನ ನಾಲ್ಕನೇ ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಕ್ಯಾಂಪ್ ತರಬೇತಿಯಲ್ಲಿದ್ದ ಬಿಹೆಚ್ಎಂ ತಿಲಕ್ ರಾಜ್, ಕೆಡೆಟ್ ಮಹೇಶ್, ಜುಬೇದ್, ಮನೋಜ್, ದರ್ಶನ್ ಕುರಿಗಾಯಿ ಸೇರಿದಂತೆ ಐದು ಕುರಿಗಳ ರಕ್ಷಣೆ ಮಾಡಿದ್ದಾರೆ.