ಬೆಳಗಾವಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಶಿವಸೇನೆ ಯುಬಿಟಿ ಬಣ ಬೆಂಬಲ ಘೋಷಿಸಿದೆ. ಸಚಿವ ಸತೀಶ್ ಜಾರಕಿಹೊಳಿ ಪುತ್ರಿ, ಚಿಕ್ಕೋಡಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿಗೆ ಶಿವಸೇನೆ ಬೆಂಬಲ ಸೂಚಿಸಿದೆ. ಮಹಾರಾಷ್ಟ್ರ ಗಡಿ ಪ್ರದೇಶವಾಗಿರುವುದರಿಂದ, ಈ ಭಾಗದಲ್ಲಿ ಸಾಕಷ್ಟು ಸಂಖ್ಯೆಯ ಮರಾಠಿಗರಿದ್ದು, ಶಿವಸೇನೆಯ ಬೆಂಬಲದಿಂದ ಪ್ರಿಯಾಂಕಾ ಜಾರಕಿಹೊಳಿಗೆ ಹೆಚ್ಚಿನ ಬಲ ಸಿಕ್ಕಂತಾಗಿದೆ. ಚಿಕ್ಕೋಡಿ ಸಮೀಪದ ಕುರುಂದವಾಡದಲ್ಲಿ ಕಾಂಗ್ರೆಸ್ ಮುಖಂಡರಾದ ವಿವೇಕ್ ಜತ್ತಿ ಮತ್ತು ಮಂಜೂರ್ ಸಂಶೇರ್ ಶಿವಸೇನೆಯ ಮುಖಂಡ ವೈಭವ್ ಉಂಗಳೆ ಅವರನ್ನು ಭೇಟಿಯಾದರು. ಕಾಂಗ್ರೆಸ್ ಗೆ ಬೆಂಬಲ ನೀಡುವುದಾಗಿ ಉಂಗಳೆ ಭರವಸೆ ನೀಡಿದ್ದಾರೆ. ಅಲ್ಲದೆ ಮರಾಠಿ ಪ್ರದೇಶಗಳಲ್ಲಿ ಪ್ರಚಾರ ನಡೆಸುವುದಾಗಿಯೂ ಅವರು ತಿಳಿಸಿದ್ದಾರೆ. ಮೇ 7ರಂದು ಇಲ್ಲಿ ಮತದಾನ ನಡೆಯಲಿದೆ.