ನವದೆಹಲಿ: ರಾಜ್‌ಕೋಟ್ ಕೋಟೆಯಲ್ಲಿ ಛತ್ರಪತಿ ಶಿವಾಜಿ ಪ್ರತಿಮೆ ಕುಸಿತವಾಗಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಕ್ಷಮೆಯಾಚಿಸಿದ್ದಾರೆ. ನಾನು ಇಲ್ಲಿಗೆ ಬಂದಿಳಿದ ಕ್ಷಣದಲ್ಲಿ, ಪ್ರತಿಮೆ ಕುಸಿತದ ಬಗ್ಗೆ ನಾನು ಮೊದಲು ಛತ್ರಪತಿ ಶಿವಾಜಿ ಬಳಿ ಕ್ಷಮೆಯಾಚಿಸಿದೆ. ಪ್ರತಿಮೆ ಕುಸಿತದಿಂದ ನೊಂದಿರುವ ಜನರಲ್ಲಿ ನಾನು ಕ್ಷಮೆಯಾಚಿಸುತ್ತೇನೆ ಎಂದು ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜರನ್ನು ತಮ್ಮ ಆರಾಧ್ಯ ದೈವವೆಂದು ಪರಿಗಣಿಸುವವರು ಮತ್ತು ಘಟನೆಯಿಂದ ತೀವ್ರವಾಗಿ ನೊಂದಿರುವವರ ಬಳಿ ನಾನು ತಲೆಬಾಗಿ ಕ್ಷಮೆಯಾಚಿಸುತ್ತೇನೆ. ನಮ್ಮ ಮೌಲ್ಯಗಳು ವಿಭಿನ್ನವಾಗಿವೆ. ಇದಕ್ಕಿಂತ ದೊಡ್ಡದು ಏನು ಇಲ್ಲ ಎಂದು ಮೋದಿ ತಿಳಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ನೌಕಾಸೇನೆ ದಿನಾಚರಣೆಯ ಸಂದರ್ಭ ಪ್ರಧಾನಿ ಮೋದಿ ಅವರು ಪ್ರತಿಮೆಯನ್ನು ಅನಾವರಣಗೊಳಿಸಿದ್ದರು. ಈ ಪ್ರತಿಮೆಯು ಮರಾಠಾ ನೌಕಾಪಡೆ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಕಡಲ ರಕ್ಷಣೆ ಮತ್ತು ಭದ್ರತೆಯ ಪರಂಪರೆಯನ್ನು ಗೌರವಿಸುವ ಗುರಿಯನ್ನು ಹೊಂದಿದೆ. ಆಧುನಿಕ ಭಾರತೀಯ ನೌಕಾಸೇನೆಯೊಂದಿಗೆ ಐತಿಹಾಸಿಕ ಸಂಬಂಧವನ್ನು ಹೊಂದಿದೆ ಎಂದು ಮಾತನಾಡಿದ್ದಾರೆ.
ಪ್ರತಿಪಕ್ಷ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟವು, ಪ್ರತಿಮೆ ನಿರ್ಮಾಣದ ವಿಷಯದಲ್ಲಿ ಆಡಳಿತಾರೂಢ ಸರ್ಕಾರ ಭ್ರಷ್ಟಾಚಾರ ಮಾಡಿದೆ ಎಂದು ಆರೋಪಿಸಿದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದೆ.
ದುರದೃಷ್ಟಕರ ಘಟನೆಯ ತನಿಖೆಗಾಗಿ ಭಾರತೀಯ ನೌಕಾಸೇನೆಯ ನೇತೃತ್ವದ ಜಂಟಿ ತಾಂತ್ರಿಕ ಸಮಿತಿಯನ್ನು ಮಹಾರಾಷ್ಟ್ರ ಸರ್ಕಾರ ಮತ್ತು ತಾಂತ್ರಿಕ ತಜ್ಞರ ಪ್ರತಿನಿಧಿಗಳೊಂದಿಗೆ ರಚಿಸಲಾಗುತ್ತಿದೆ.