Wednesday, September 11, 2024
Homeಮೂಡುಬಿದಿರೆಈ ಬಾರಿ ಶಿವಮೊಗ್ಗದಲ್ಲೂ ಕಂಬಳ | ಮೂಡುಬಿದಿರೆಯಲ್ಲಿ ನಡೆದ ಜಿಲ್ಲಾ ಕಂಬಳ ಸಮಿತಿ ವಿಶೇಷ ಮಹಾಸಭೆಯಲ್ಲಿ...

ಈ ಬಾರಿ ಶಿವಮೊಗ್ಗದಲ್ಲೂ ಕಂಬಳ | ಮೂಡುಬಿದಿರೆಯಲ್ಲಿ ನಡೆದ ಜಿಲ್ಲಾ ಕಂಬಳ ಸಮಿತಿ ವಿಶೇಷ ಮಹಾಸಭೆಯಲ್ಲಿ ಒಪ್ಪಿಗೆ

ಮೂಡುಬಿದಿರೆ: ಈ ಬಾರಿ ಶಿವಮೊಗ್ಗದಲ್ಲೂ ಕಂಬಳ ನಡೆಯಲಿದೆ ಎಂದು ಶಿವಮೊಗ್ಗ ಕಂಬಳ ಸಮಿತಿಯ ಎಲ್ಯಾಸ್‌ ಲೂಯಿಸ್ ತಿಳಿಸಿದರು. ಮೂಡುಬಿದಿರೆಯಲ್ಲಿ ಇಂದು ನಡೆದ ಜಿಲ್ಲಾ ಕಂಬಳ ಸಮಿತಿಯ ಜಿಲ್ಲಾ ಕಂಬಳ ವಿಶೇಷ ಮಹಾಸಭೆಯಲ್ಲಿ ಅವರು ಈ ವಿಚಾರ ತಿಳಿಸಿದ್ದಾರೆ.
ಕಾಂತಾರ ಸಿನೆಮಾದಲ್ಲಿ ಕಂಬಳ ನೋಡಿದ ಬಳಿಕ ಶಿವಮೊಗ್ಗ ಜಿಲ್ಲೆಯಲ್ಲಿ ಕಂಬಳ ಮಾಡುವ ಉತ್ಸಾಹ ಬಂತು. ಈ ಕಂಬಳ ನಡೆಸಲು ರೋಟರಿ ಸಂಸ್ಥೆ ಸಹಿತ ತುಂಬಾ ಮಂದಿ ಬೆಂಬಲ ನೀಡುತ್ತಿದ್ದಾರೆ. ಮಾಜಿ ಡಿಸಿಎಂ ಈಶ್ವರಪ್ಪ ಆಪ್ತ ಸಂತೋಷ್‌ ಮತ್ತು ಇತರರೂ ಈ ಕಂಬಳಕ್ಕೆ ಸಹಕರಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ ಶಿವಮೊಗ್ಗದಲ್ಲಿ ಕಂಬಳ ನಡೆಸುವ ಬಗ್ಗೆ ಜಿಲ್ಲಾ ಕಂಬಳ ಸಮಿತಿಯ ಸದಸ್ಯರಲ್ಲಿ ಕಂಬಳ ಸಮಿತಿಯ ಅಧ್ಯಕ್ಷ ಡಾ. ದೇವಿಪ್ರಸಾದ್‌ ಶೆಟ್ಟಿ ಬೆಳಪು ಅವರು ಅನುಮತಿ ಕೋರಿದರು. ಎಲ್ಲರ ಅನುಮೋದನೆಯೊಂದಿಗೆ ಕೊನೆಯ ಕಂಬಳವಾಗಿ ಶಿವಮೊಗ್ಗದಲ್ಲಿ ನಡೆಸಲು ನಿರ್ಧರಿಸಲಾಯಿತು. ಶಿವಮೊಗ್ಗ ಕಂಬಳ ಸಮಿತಿಗೆ ಇದೇ ವೇಳೆ ಸದಸ್ಯತ್ವವನ್ನೂ ವಿತರಿಸಲಾಯಿತು. ಮಾಜಿ ಡಿಸಿಎಂ ಈಶ್ವರಪ್ಪರ ಮಗ ಕಾಂತೇಶ್‌ ಅವರ ಜಮೀನಿನಲ್ಲಿ ಕಂಬಳ ನಡೆಯಲಿದೆ ಎಂದು ಡಾ. ದೇವಿಪ್ರಸಾದ್‌ ಶೆಟ್ಟಿ ಬೆಳಪು ಮಾಹಿತಿ ನೀಡಿದರು.
ಶಿವಮೊಗ್ಗ ಜಿಲ್ಲಾ ಕಂಬಳ ಆಯೋಜನೆಯ ಉತ್ಸುಕತೆ ಹೊಂದಿರುವ ಕಲ್ಪನಾ, ವಿಮಲೇಶ್‌ ಹೆಗ್ಡೆ, ನಾಗರಾಜ್‌ ಮುಂತಾದವರು ಈ ವೇಳೆ ಉಪಸ್ಥಿತರಿದ್ದರು. ಕಂಬಳ ವಿಶೇಷ ಮಹಾಸಭೆಯಲ್ಲಿ ಜಿಲ್ಲಾ ಕಂಬಳ ಸಮಿತಿಯ ಗೌರವಾಧ್ಯಕ್ಷ ಎರ್ಮಾಳ್‌ ರೋಹಿತ್‌ ಕುಮಾರ್‌ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಮುಚ್ಚೂರು ಲೋಕೇಶ್ ಶೆಟ್ಟಿ, ಕೋಶಾಧಿಕಾರಿ ಚಂದ್ರಹಾಸ ಸನಿಲ್‌, ತೀರ್ಪುಗಾರರ ಸಂಚಾಲಕ ವಿಜಯ ಕುಮಾರ್‌ ಕಂಗಿನಮನೆ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular