ಮುಂಬೈ: ಫಿಂಗರ್ ಚಿಪ್ಸ್ ಬಗ್ಗೆ ಕೇಳಿರಬಹುದು. ಆದರೆ ಆರ್ಡರ್ ಮಾಡಿದ ಐಸ್‌ಕ್ರೀಂನಲ್ಲಿ ನಿಮಗೆ ಫಿಂಗರ್( ಮಾನವ ಬೆರಳು) ಸಿಕ್ಕಿದ್ರೆ ಸ್ಥಿತಿ ಹೇಗಿರುತ್ತೆ ಊಹಿಸಿಕೊಳ್ಳಿ. ಇಂತಹದೊಂದು ಆಘಾತಕಾರಿ ಅನುಭವ ವಾಣಿಜ್ಯ ನಗರಿಯ ವೈದ್ಯರೊಬ್ಬರಿಗೆ ಆಗಿದ್ದು ಅವರೀಗ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಹಾಗಾದರೆ ನಡೆದಿದ್ದೇನು?
ಮುಂಬೈನ ಓರ್ಲೆಮ್ ಬ್ರೆಂಡನ್ ಸೆರಾವೊ ಎಂಬ 27 ವರ್ಷದ ಯುವಕ ಆರ್ಡರ್ ಮಾಡಿದ ಐಸ್‌ಕ್ರೀಂನಲ್ಲಿ ಹೀಗೆ ಮಾನವ ಬೆರಳು ಪತ್ತೆಯಾಗಿದೆ. ಇವರ ಸೋದರಿ ಆನ್ಲೈನ್ ದಿನಸಿ ವಸ್ತುಗಳನ್ನು ಮನೆಗೆ ಡೆಲಿವರಿ ನೀಡುವ ಜೆಪ್ಟೊ ಆಪ್‌ನಲ್ಲಿ ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ಆರ್ಡರ್ ಮಾಡುತ್ತಿದ್ದ ವೇಳೆ ಮನೆಯಲ್ಲೇ ಇದ್ದ ಸೆರಾವೊ ಅವರು ಮೂರು ಬಟರ್ ಸ್ಕಾಚ್ ಐಸ್‌ಕ್ರಿಂ ಅನ್ನು ಕೂಡ ಆರ್ಡರ್ ಮಾಡುವಂತೆ ಸೋದರಿಗೆ ಹೇಳಿದ್ದಾರೆ. ಅದರಂತೆ ಸೋದರಿ ಮೂರು ಬಟರ್ ಸ್ಕಾಚ್ ಐಸ್‌ಕ್ರೀಂ ಅನ್ನು ದಿನಸಿ ಆರ್ಡರ್ ಮಾಡುವ ವೇಳೆ ಜೆಪ್ಟೋದಲ್ಲಿ ಆರ್ಡರ್ ಮಾಡಿದ್ದರು.
ನಂತರ ಸ್ವಲ್ಪ ಹೊತ್ತಿನಲ್ಲಿ ಮನೆಗೆ ಬಂದ ಐಸ್‌ಕ್ರೀಂ ಆರ್ಡರ್‌ನ್ನು ಬಟರ್ ಸ್ಕಾಚ್ ಕೋನ್ ಐಸ್‌ಕ್ರಿಂ ಅನ್ನು ತಿನ್ನಲು ಶುರು ಮಾಡಿದಾಗ ಸೆರವೋ ಅವರಿಗೆ ಏನೋ ಗಟ್ಟಿಯಾದ ವಸ್ತು ನಾಲಗೆಗೆ ಸಿಕ್ಕಿದ್ದಂತಾಗಿದೆ. ಈ ವೇಳೆ ಸರಿಯಾಗಿ ನೋಡಿದಾಗ ಐಸ್‌ಕ್ರೀಂನಲ್ಲಿ 2 ಇಂಚಿನಷ್ಟು ಉದ್ದದ ಬೆರಳು ಸಿಕ್ಕಿದ್ದಾಗಿ ಅವರು ಹೇಳಿದ್ದು, ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮಲದ್‌ನ ಪೊಲೀಸರು, ಹೀಗೆ ಐಸ್‌ಕ್ರೀಂನಲ್ಲಿ ಸಿಕ್ಕ ಬೆರಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಇದರ ಜೊತೆಗೆ ಈ ಐಸ್‌ಕ್ರೀಂ ಉತ್ಪಾದನೆ ಮಾಡುವ ಪ್ಯಾಕ್ಟರಿ ಹಾಗೂ ಐಸ್‌ಕ್ರೀಂ ಪ್ಯಾಕ್ ಆದ ಸ್ಥಳದಲ್ಲೂ ಪರಿಶೀಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಐಸ್‌ಕ್ರೀಂ ತಯಾರಿಕಾ ಸಂಸ್ಥೆಯನ್ನು ಫೋನ್ ಹಾಗೂ ಇಮೇಲ್ ಮೂಲಕ ಸಂಪರ್ಕಿಸಲು ಯತ್ನಿಸಿದ್ದು, ಆದರೆ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.