ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಆಪ್ತ ಸ್ನೇಹಿತನನ್ನೇ ಕೊಲೆ ಮಾಡಿದ್ದ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಬಂಧಿಸಿದ್ದಾರೆ. ಶಿವರಾಜ ಕಮ್ಮಾರ (23) ಕೊಲೆಯಾದ ಯುವಕ. ಶಿವರಾಜ ಕಮ್ಮಾರನ ಸ್ನೇಹಿತರಾದ ಸುದೀಪ ರಾಯಾಪುರ, ಕಿರಣ್ ಕೊಲೆ ಮಾಡಿರುವ ಆರೋಪಿಗಳೆಂದು ಗುರುತಿಸಲಾಗಿದೆ.
ಶಿವರಾಜ್ ಮತ್ತು ಸುದೀಪ ಸ್ನೇಹಿತರಾಗಿದ್ದು, ಶುಕ್ರವಾರ ಇಬ್ಬರೂ ಮನೆಯಲ್ಲಿ ಒಟ್ಟಿಗೆ ಹಬ್ಬ ಆಚರಿಸಿದ್ದರು. ಹಬ್ಬದ ಬಳಿಕ ಶಿವರಾಜ ಬೇಗ ಬರುತ್ತೇನೆ ಅಮ್ಮಾ ಎಂದು ಹೋದವನು ಮರಳಿಬಂದದ್ದು ಹೆಣವಾಗಿದೆ. ಶಿವರಾಜನ ತಲೆಗೆ ರಾಡ್‌ನಿಂದ ಹೊಡೆದು 30ಕ್ಕೂ ಹೆಚ್ಚು ಬಾರಿ ಚುಚ್ಚಿ ಕೊಲೆ ಮಾಡಲಾಗಿದೆ. ಗೋಪನಕೊಪ್ಪದ ಬಳಿ ಹತ್ಯೆ ನಡೆದಿದೆ.
ಆರೋಪಿಗಳಾದ ಸುದೀಪ್ ಮತ್ತು ಕಿರಣ್‌ನನ್ನು ಇತರ ಆರೋಪಿಗಳಿದ್ದ ಸ್ಥಳಕ್ಕೆ ಅಶೋಕ ನಗರ ಠಾಣೆಯ ಪೊಲೀಸರು ಕರೆದೊಯ್ದಿದ್ದು, ಈ ವೇಳೆ ಆರೋಪಿಗಳು ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಅವರನ್ನು ಬಂಧಿಸಿದ್ದಾರೆ. ಹಳೇ ಹುಬ್ಬಳ್ಳಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅಶೋಕ ನಗರ ಠಾಣಾ ಇನ್ಸ್‌ಪೆಕ್ಟರ್ ಕಿರಣ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.