ಮುಂಬೈ: ಜನಪ್ರಿಯ ಬಾಲಿವುಡ್ ನಟ ಸಲ್ಮಾನ್ ಖಾನ್ ನಿವಾಸದ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಿಹಾರದ ಚಂಪರಣ್ ಜಿಲ್ಲೆಯ ಮಸಿಹಿ ಮೂಲದ ವಿಕ್ಕಿ ಸಾಹಬ್ ಗುಪ್ತಾ ಮ್ತು ಸಾಗರ್ ಜೋಗೇಂದ್ರ ಪಾಲ್ ಎಂಬ ಇಬ್ಬರನ್ನು ಗುಜರಾತ್ ನಿಂದ ಬಂಧಿಸಲಾಗಿದೆ. ಭಾನುವಾರ ಮುಂಜಾನೆ 5 ಗಂಟೆಗೆ ಬಾಂದ್ರಾದ ಗ್ಯಾಲಕ್ಸಿ ಅಪಾರ್ಟ್ ಮೆಂಟ್ ನ ಹೊರಗೆ ಬೈಕ್ ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ನಾಲ್ಕು ಸುತ್ತು ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದರು. ಗುಂಡಿನ ದಾಳಿ ನಡೆದಾಗ ಸಲ್ಮಾನ್ ಖಾನ್ ಮನೆಯಲ್ಲಿದ್ದರು. ಘಟನೆಯಲ್ಲಿ ಯಾರೂ ಗಾಯಗೊಂಡಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಜೈಲಿನಲ್ಲಿರುವ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತು ವಾಂಟೆಡಡ್ ಗ್ಯಾಂಗ್ ಸ್ಟರ್ ಗೋಲ್ಡಿ ಬ್ರಾರ್ ನಟ ಸಲ್ಮಾನ್ ಖಾನ್ ರನ್ನು ಹತ್ಯೆ ಮಾಡುವುದಾಗಿ ಹಲವು ಬಾರಿ ಬೆದರಿಕೆಯೊಡ್ದಿದ್ದರು. ಖಾನ್ ರನ್ನು ಹತ್ಯೆ ಮಾಡಲು ಶೂಟರ್ ಗಳನ್ನು ಇವರುಗಳು ಮುಂಬೈಗೆ ಕಳುಹಿಸಿದ್ದರು ಎಂದು ವರದಿಗಳಾಗಿದ್ದವು. ಇನ್ನೊಂದೆಡೆ ಲಾರೆನ್ಸ್ ಬಿಷ್ಣೊಯ್ ಅವರ ಸಹೋದರ ಅನ್ಮೋಲ್ ಬಿಷ್ಣೋಯ್ ಸಾಮಾಜಿಕ ಮಾಧ್ಯಮದ ಪೋಸ್ಟ್ ನಲ್ಲಿ ಈ ಘಟನೆಯ ಹೊಣೆ ಹೊತ್ತುಕೊಂಡಿರುವುದಾಗಿಯೂ ವರದಿಯಾಗಿತ್ತು. ಬಂಧಿತ ಆರೋಪಿಗಳನ್ನು ಇಂದು ಮುಂಬೈಗೆ ಕರೆ ತರಲಾಗುತ್ತದೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.