Friday, March 21, 2025
Homeಧಾರ್ಮಿಕಶ್ರೀ ಸಿದ್ಧಿವಿನಾಯಕ ದೇವಸ್ಥಾನ ಹಟ್ಟಿಯಂಗಡಿ ನೂತನ ದೇವಾಲಯ ಲೋಕಾರ್ಪಣೆ, ಬ್ರಹ್ಮಕಲಶೋತ್ಸವ ಕಾರ್ಯಕ್ರಮ

ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಹಟ್ಟಿಯಂಗಡಿ ನೂತನ ದೇವಾಲಯ ಲೋಕಾರ್ಪಣೆ, ಬ್ರಹ್ಮಕಲಶೋತ್ಸವ ಕಾರ್ಯಕ್ರಮ

ಕುಂದಾಪುರ:ಉಡುಪಿ ಜಿಲ್ಲೆಯ ಪ್ರಸಿದ್ಧ ಕುಂದಾಪುರ ತಾಲೂಕಿನ ಹಟ್ಟಿಯಂಗಡಿ ನೂತನ ದೇವಾಲಯ ಲೋಕಾರ್ಪಣೆ, ಬ್ರಹ್ಮಕಲಶೋತ್ಸವ ಕಾರ್ಯಕ್ರಮ ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾ ಪೀಠಾಧೀಶ್ವರರಾದ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀ ತೀರ್ಥ ಮಹಾಸ್ವಾಮೀಗಳ ಫರ್ಮಾನುಗ್ರಹದಿಂದ ತತ್ಕರಕಮಲಸಂಜಾತರಾದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳ ನೇತೃತ್ವದಲ್ಲಿ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಬುಧವಾರ ವಿಜೃಂಭಣೆಯಿಂದ ನಡೆಯಿತು.

ಮಹಾ ಅನ್ನಸಂತರ್ಪಣೆ, ಶ್ರೀದೇವರ ಬೆಳ್ಳಿರಥ ಸಮರ್ಪಣೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಜರುಗಿತು. ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳವರು ಆಶೀರ್ವಚನ ನೀಡಿ ಮಾತನಾಡಿ, ಪರಿಶುದ್ಧವಾದ ಭಾವನೆಯಿಂದ ನಮ್ಮನ್ನು ದೇವರಿಗೆ ಅರ್ಪಣೆ ಮಾಡಿಕೊಳ್ಳುವುದರಿಂದ ಭಗವಂತನನ್ನು ನೋಡಲು ಸಾಧ್ಯವಿದೆ. ಭಕ್ತಿ ಎನ್ನುವುದು ಅನುಭವಕ್ಕೆ ಬರುವಂತದ್ದು ಆಗಿರಬೇಕು ಅದಕ್ಕೆ ನಾವು ಪ್ರಯತ್ನಿಸಬೇಕು ಎಂದು ಹೇಳಿದರು. ಆಧ್ಯಾತ್ಮಿಕ ಮಾರ್ಗ ಎನ್ನುವುದು ಜೀವನದಲ್ಲಿ ನಮ್ಮನ್ನು ಉತ್ತಮವಾದ ಸ್ಥಾನಕ್ಕೆ ಕರೆದು ಕೊಂಡು ಹೋಗುತ್ತದೆ. ಜೀವನದಲ್ಲಿ ಗುರಿ ಹೊಂದಿದಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ನುಡಿದರು. ದೇವಸ್ಥಾನದ ಧರ್ಮದರ್ಶಿ ಹೆಚ್.ಬಾಲಚಂದ್ರ ಭಟ್ಟ ಮಾತನಾಡಿ, ಪ್ರಶ್ನಾ ಚಿಂತನಾ ಕಾರ್ಯದ ಮುಖಾಂತರ ದೇವರ ಸನ್ನಿಧಿಯನ್ನು ಜೀರ್ಣೋದ್ಧಾರ ಮಾಡಲಾಗಿದೆ. ದೇವರ ಪೂರ್ಣಾನುಗ್ರಹದಿಂದ ಇವೊಂದು ದೇವತಾ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದೆ ಎಂದರು. ಕ್ಷೇತ್ರದ ಅಭಿವೃದ್ಧಿಗೆ ದಿ.ರಾಮಚಂದ್ರ ಭಟ್ಟ ಅವರ ಕೊಡುಗೆ ಅಪಾರವಾದದ್ದು ಎಂದು ಹೇಳಿದರು. ಪ್ರಾಂತೀಯ ಧರ್ಮಾಧಿಕಾರಿಗಳು ಶ್ರೀ ಶಾರದಾ ಪೀಠಂ ಶೃಂಗೇರಿ, ನಾಗಪಾತ್ರಿಗಳು ಬಡಾಕೆರೆ ಲೋಕೇಶ್ ಅಡಿಗ ಅವರು ಸ್ವಾಗತಿಸಿ ಮಾತನಾಡಿ, 26 ವರ್ಷಗಳ ಹಿಂದೆ ಜಗದ್ಗುರುಗಳು ಕ್ಷೇತ್ರಕ್ಕೆ ಭೇಟಿ ನೀಡಿ ದೇವತಾ ಕಾರ್ಯದಲ್ಲಿ ಭಾಗಿಯಾಗಿದ್ದರು ಅವರ ಪೂರ್ಣಾನುಗ್ರಹದಿಂದ ಶ್ರೀ ಕ್ಷೇತ್ರ ಅಭಿವೃದ್ಧಿಗೊಂಡು ಜಗತ್ ಪ್ರಸಿದ್ಧಿ ಹೊಂದಿದೆ ಎಂದರು. ಶರಣ ಕುಮಾರ್ ಭಟ್ಟ ನಿರೂಪಿಸಿದರು. ಈ ಸಂದರ್ಭದಲ್ಲಿ ಭಕ್ತಾದಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳವರು ಶ್ರೀ ದೇವರ ಪ್ರಸನ್ನ ಪೂಜೆ ನೆರವೇರಿಸಿ, ನೂತನ ದೇವಾಲಯದ ಲೋಕಾರ್ಪಣೆ,ಶಿಖರ ಕಲಶಸ್ಥಾಪನೆ, ಅಭಿಷೇಕ ಸೇವೆಯನ್ನು ನೆರವೇರಿಸಿದರು. ಸಾವಿರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಶ್ರೀ ದೇವರ ಅನ್ನ ಪ್ರಸಾದವನ್ನು ಸ್ವೀಕರಿಸಿದರು.

RELATED ARTICLES
- Advertisment -
Google search engine

Most Popular