ಕಲ್ಯಾಣಪುರ: ಗರೋಡಿಯ ಪುನರ್ ಪ್ರತಿಷ್ಟೆ ಹಾಗೂ ಬ್ರಹ್ಮಕಲಶೋತ್ಸವದ ಅಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಇಂದು ನಡೆಯಿತು. ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಯಶಪಾಲ್ .ಎ. ಸುವರ್ಣ ಇವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿದರು.
ಗರೋಡಿ ಪರಂಪರೆಯಂತೆ ನಿರ್ಮಾಣಗೊಳ್ಳುತ್ತಿರುವ ನೂತನ ಆಲಯದ ಪ್ರಗತಿಯ ಬಗ್ಗೆ ಸಂತಸ ವ್ಯಕ್ತಪಡಿಸಿ ಗರೋಡಿ ಅಭಿವೃದ್ದಿಗೆ ತನ್ನ ಪ್ರದೇಶಾಭಿವೃದ್ದಿ ನಿಧಿಯಿಂದ ಅನುದಾನವನ್ನು ಮಂಜೂರು ಮಾಡುವುದಾಗಿ ಭರವಸೆ ನೀಡಿದರು. ವೈಯಕ್ತಿಕ ನೆಲೆಯಲ್ಲಿಯೂ ದೇಣಿಗೆ ನೀಡುವ ಭರವಸೆಯನ್ನು ನೀಡಿದರು. ಗರೋಡಿಗೆ ಸಂಪರ್ಕಿಸುವ ರಸ್ತೆಯನ್ನು ತುರ್ತಾಗಿ ನಿರ್ಮಿಸುವುದಾಗಿ ತಿಳಿಸಿದ ಶಾಸಕರು ಗರೋಡಿಯ ಪುಷ್ಕರಣಿ ಅಭಿವೃದ್ದಿಗೂ ಗಮನ ಹರಿಸುವುದಾಗಿ ಹೇಳಿದರು. ರಸ್ತೆಯೊಂದಿಗೆ ನದಿ ಬದಿಯ ತಡೆಗೋಡೆಯ ನಿರ್ಮಾಣಕ್ಕೆ ಅಗತ್ಯ ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಅಗಮಿಸಿದ ಯುವವಾಹಿನಿ ಉಡುಪಿ ಘಟಕದ ಅಧ್ಯಕ್ಷರಾದ ಶ್ರೀ ದಯಾನಂದ ಕರ್ಕೇರ ಇವರು ಪಕ್ಕಿಬೆಟ್ಟು ಗರೋಡಿಯ ಐತಿಹಾಸಿಕ ಮಹತ್ವದ ಬಗ್ಗೆ ವಿವರಿಸುತ್ತಾ ಗರೋಡಿಯ ಪುನರುತ್ಥಾನ ಪರ್ವವೂ ಇತಿಹಾಸದ ಪುಟದಲ್ಲಿ ದಾಖಲಾಗುವಂತಾಗಲಿ ಎಂದು ಶುಭ ಹಾರೈಸಿದರು.
ಕಲ್ಯಾಣಪುರ ಪಂಚಾಯತ್ ನ ಅಧ್ಯಕ್ಷರಾದ ಶ್ರೀ ನಾಗರಾಜ್ ರವರು ಮಾತನಾಡುತ್ತಾ ಗರೋಡಿಯ ಪುನರ್ ಪ್ರತಿಷ್ಟೆ ಹಾಗೂ ಬ್ರಹ್ಮ ಕುಂಭಾಭಿಷೇಕದ ಸಂಧರ್ಭದಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು. ನಗರಸಭಾ ಸದಸ್ಯರಾದ ಶ್ರೀಮತಿ ಜಯಂತಿ ಪೂಜಾರ್ತಿ, ಕಲ್ಯಾಣಪುರ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ಸತೀಶ್ ನಾಯ್ಕ್ , ಕೃಷ್ಣ ದೇವಾಡಿಗ, ಗರೋಡಿಯ ನಾಲ್ಕು ಸಮಿತಿಗಳ ಅಧ್ಯಕ್ಷರು, ಗೌರಾವಾ ಧ್ಯಕ್ಷರು, ಕಾರ್ಯಾಧ್ಯಕ್ಷರು, ನಾಲ್ಕು ಕರೆ ಗುರಿಕಾರರು, ಅರ್ಚಕರು, ದರ್ಶನ ಪೂಜಾರಿಗಳು, ಸ್ಥಳವಂದಿಗರು ಉಪಸ್ಥಿತರಿದ್ದರು.
ವಿಠಲ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರ ಉಪಸ್ಥಿತಿ ಕಾರ್ಯಕ್ರಮಕ್ಕೆ ವಿಶೇಷ ಮೆರಗನ್ನು ನೀಡಿತು. ಪ್ರಕಾಶ್ ಪೂಜಾರಿ ಸ್ವಾಗತಿಸಿ, ಶ್ರೀ ಭಾಸ್ಕರ ಸುವರ್ಣ ವಂದಿಸಿದರು. ರಾಘವೇಂದ್ರ ಅಮೀನ್ ಕಾರ್ಯಕ್ರಮ ನಿರೂಪಿಸಿದರು.