ಲಂಡನ್: ಸಾಧನೆಗೆ ವಯಸ್ಸಿನ ಮಿತಿ ಇರುವುದಿಲ್ಲ ಎಂಬುದನ್ನು ಇವರು ಈಗ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.. ಬದುಕಿನಲ್ಲಿ ಜೀವನೋತ್ಸಾಹ ಉಳಿಸಿಕೊಂಡು, ಸದಾ ಸಕ್ರಿಯವಾಗಿರುವವರಿಗೆ ವಯಸ್ಸು ಕೇವಲ ಒಂದು ನಂಬರ್ ಅಷ್ಟೇ. ಯಾವ ಸಾಧನೆಗೂ ಕೂಡ ವಯಸ್ಸು ಅಡ್ಡಿಯಾಗುವುದಿಲ್ಲ ಎನ್ನುವುದಕ್ಕೆ ಬ್ರಿಟನ್ನ 102 ವರ್ಷ ಪ್ರಾಯದ ಮೆನೆಟ್ ಬೈಲಿ ಜೀವಂತ ಸಾಕ್ಷಿಯಾಗಿದ್ದಾರೆ.
ಬ್ರಿಟನ್ನ ಅತ್ಯಂತ ಹಿರಿಯ ಸ್ಕೈ ಡೈವರ್ ಅನ್ನುವ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿರುವ ಮೆನೆಟ್ ಬೈಲಿ, ತಮ್ಮ 102ನೇ ವಯಸ್ಸಿನಲ್ಲಿ 2,100 ಮೀಟರ್ ಎತ್ತರದಿಂದ ಸ್ಕೈ ಡೈವ್ ಮಾಡುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. ಎರಡು ವರ್ಷಗಳ ಹಿಂದೆ ಇದೇ ಮೆನೆಟ್ ಬೈಲಿ ತಮ್ಮ 100ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಸಿಲ್ವರ್ಸ್ಟೋನ್ ಮೋಟರ್ ರೇಸಿಂಗ್ ಸರ್ಕ್ಯೂಟ್ನ ಸ್ಪರ್ಧೆಯಲ್ಲಿ ಗಂಟೆಗೆ 210 ಕಿಲೋಮೀಟರ್ ವೇಗದಲ್ಲಿ ಫೆರಾರಿ ಕಾರ್ ಓಡಿಸಿ ದಾಖಲೆ ಬರೆದಿದ್ದರು.
ಈಗ ಬೆಕ್ಲೆಸ್ ಏರ್ಫೀಲ್ಡ್ ಏರ್ಪಡಿಸಿದ್ದ ಸ್ಕೈ ಡೈವ್ನಲ್ಲಿ ಸುಮಾರು 2,100 ಮೀಟರ್ ಎತ್ತರದ ಸ್ಕೈ ಡೈವಿಂಗ್ ಮಾಡುವ ಮೂಲಕ ಸಾಧನೆಗೆ, ಜೀವನೋತ್ಸಾಹಕ್ಕೆ ವಯಸ್ಸು ಎಂದಿಗೂ ಅಡ್ಡಿಯಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಬ್ರಿಟನ್ನ ಮಾಧ್ಯಮಗಳ ಮುಂದೆ ಮಾತನಾಡಿರುವ 102ರ ಹರೆಯದ ಬೈಲಿ, 80, 90 ವಯಸ್ಸಿಗೆ ಬಂದವರು ಬದುಕೇ ಮುಗಿದು ಹೋಯ್ತು ಎಂದು ಕುಳಿತವರಿಗೆ ಸಂದೇಶ ನೀಡಲು ನಾನು ಈ ಸಾಹಸಕ್ಕೆ ಕೈ ಹಾಕಿದ್ದೆ. ಸ್ಕೈ ಡೈವ್ ಮಾಡುವಾಗ ಆರಂಭದಲ್ಲಿ ಭಯವಾಗಿದ್ದು ನಿಜ, ಆದರೆ ನಾನು ಕಣ್ಣನ್ನು ಗಟ್ಟಿಯಾಗಿ ಮುಚ್ಚಿಕೊಂಡಿದ್ದೆ. ಇದು ನನಗೆ ಸಹಾಯವಾಯ್ತು. ವಯಸ್ಸಾಯ್ತು ಎಂದು ಮನೆಯಲ್ಲಿ ಕುಳಿತುಕೊಳ್ಳುವವರಿಗೆ ಯಾವುವೇ ವಯಸ್ಸಲ್ಲೂ ನಾವು ಚಟುವಟಿಕೆಯಿಂದ ಇರಬಹುದು ಅನ್ನೋದನ್ನು ಹೇಳಲು ನಾನು ಈ ಸಾಧನೆಗೆ ಕೈ ಹಾಕಿದೆ ಎಂದಿದ್ದಾರೆ.
ವಿಡಿಯೋ ನೋಡಲು ಲಿಂಕ್ ಕ್ಲಿಕ್ ಮಾಡಿ….