ಲಕ್ನೊ: ವಿಷಕಾರಿ ಹಾವು ಕಡಿತವಾದರೆ ಬದುಕುಳಿಯುವುದೇ ಕಷ್ಟ. ಅಂತಹುದರಲ್ಲಿ 45 ದಿನಗಳ ಅವಧಿಯಲ್ಲಿ ವ್ಯಕ್ತಿಯೊಬ್ಬರಿಗೆ ಐದು ಬಾರಿ ಹಾವು ಕಚ್ಚಿದ್ದರೂ ಪವಾಡ ಸದೃಶವಾಗಿ ಬದುಕುಳಿದ ಘಟನೆ ನಡೆದಿದೆ. ಈ ಘಟನೆ ಕಂಡು ವೈದ್ಯರೇ ಅಚ್ಚರಿ ಬಿದ್ದಿದ್ದಾರೆ.
ವಿಕಾಸ್ ದುಬೆ ಎಂಬಾತ ಹಾವಿನ ಕಡಿತದ ಭಯದಿಂದ ಮನೆಯನ್ನೇ ಬಿಟ್ಟು ತನ್ನ ಸಂಬಂಧಿಯೊಬ್ಬರ ಮನೆಯಲ್ಲಿ ಉಳಿದುಕೊಂಡಿದ್ದ. ಆದರೂ ಬಿಡದೆ ಹಾವು ದಾಳಿ ನಡೆಸಿ ಕಚ್ಚಿರುವುದು ಅಚ್ಚರಿದಾಯಕ ಘಟನೆ ನಡೆದಿದೆ.
ಜೂ. 2ರಂದು ವಿಕಾಸ್ ದುಬೆಗೆ ಮನೆಯಲ್ಲೇ ಮೊದಲ ಬಾರಿ ವಿಷಕಾರಿ ಹಾವು ಕಚ್ಚಿತ್ತು. ತಕ್ಷಣ ಆತನನ್ನು ಮನೆಯವರು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿ, ಬದುಕಿಸಿದ್ದರು. ನಂತರ ಜೂ. 10ರಂದು ಮತ್ತೊಮ್ಮೆ ದುಬೆಗೆ ಹಾವು ಕಚ್ಚಿತ್ತು. ಮತ್ತೆ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಅವರನ್ನು ಬದುಕಿಸಲಾಯಿತು. ಜೂ. 17ರಂದು ಮತ್ತೆ ಹಾವು ಕಚ್ಚಿದ್ದು, ಪ್ರಜ್ಞಾಹೀನನಾಗಿದ್ದ ದುಬೆಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಬದುಕಿಸಲಾಯಿತು.
ನಾಲ್ಕನೇ ಬಾರಿಯೂ ವಿಕಾಸ್ ದುಬೆಗೆ ಅದೇ ಮನೆಯಲ್ಲಿ ಹಾವು ಕಚ್ಚಿದ್ದು, ಕುಟುಂಬ ಸದಸ್ಯರು ಮತ್ತೆ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರು. ಆಗ ವೈದ್ಯರೇ ಅಚ್ಚರಿಗೊಳಗಾಗಿ ನಾಲ್ಕು ಬಾರಿ ಹಾವು ಕಚ್ಚಿದರೂ ಚಿಕಿತ್ಸೆ ಪಡೆದು ಬದುಕುಳಿದಿರುವುದು ಪವಾಡ ಎಂದು ಹೇಳಿರುವುದಾಗಿ ವರದಿಯೊಂದು ತಿಳಿಸಿದೆ. ಅಲ್ಲದೆ ಮನೆಬಿಟ್ಟು ಬೇರೆ ಮನೆಯಲ್ಲಿರುವಂತೆಯೂ ಅವರು ಸಲಹೆ ನೀಡಿದರು.
ಹಾಗೆ ದುಬೆ ಫತೇಪುರ್‌ನ ರಾಧಾ ನಗರದಲ್ಲಿರುವ ತನ್ನ ಚಿಕ್ಕಮ್ಮನ ಮನೆಯಲ್ಲಿ ವಾಸ್ತವ್ಯ ಹೂಡಿದ್ದ. ಆದರೂ ಐದನೇ ಬಾರಿ ಚಿಕ್ಕಮ್ಮನ ಮನೆಯಲ್ಲೂ ಹಾವು ಕಚ್ಚಿಬಿಟ್ಟಿದೆ. ಪ್ರತಿಬಾರಿಯೂ ದುಬೆಗೆ ಚಿಕಿತ್ಸೆ ನೀಡಿದ್ದ ವೈದ್ಯರಾದ ಜವಾಹರಲಾಲ್, ಇದೊಂದು ವಿಚಿತ್ರ ಪ್ರಕರಣ ಎಂದು ಹೇಳಿದ್ದಾರೆ. ಇದೀಗ ದುಬೆ ಆರೋಗ್ಯ ಸ್ಥಿತಿ ಚೆನ್ನಾಗಿದೆ ಎಂದು ವೈದ್ಯರು ಹೇಳಿದ್ದಾರೆ.