ಮಂಗಳೂರು: ವಿಷರಹಿತ ಹಾವೆಂದು ತಪ್ಪಾಗಿ ಭಾವಿಸಿ ಕನ್ನಡಿ ಹಾವನ್ನು ಕೈಯಲ್ಲಿ ಹಿಡಿದ ವ್ಯಕ್ತಿಗೆ, ಹಾವು ಕಚ್ಚಿದ ಪರಿಣಾಮ ಆ ವ್ಯಕ್ತಿ ಸಾವನ್ನಪ್ಪಿದ ಘಟನೆ ನಡೆದಿದೆ. ಬಜ್ಪೆಯ ರಾಮಚಂದ್ರ ಪೂಜಾರಿ (55) ಹಾವಿನ ಕಡಿತದಿಂದ ಸಾವನ್ನಪ್ಪಿದ ದುರ್ದೈವಿ ಎಂದು ತಿಳಿದುಬಂದಿದೆ.
ಕನ್ನಡಿ ಹಾವೊಂದು ಗುರುವಾರ ಇಲ್ಲಿ ಕಂಡು ಬಂದಿತ್ತು. ಇದನ್ನು ವಿಷರಹಿತ ಹಾವೆಂದು ಭಾವಿಸಿ ರಾಮಂದ್ರ ಪೂಜಾರಿ ಕೈಯಲ್ಲೇ ಹಿಡಿದಿದ್ದಾರೆ. ಆದರೆ ಈ ವೇಳೆ ಹಾವು ರಾಮಚಂದ್ರದ ಕೈಗೆ ಕಚ್ಚಿದೆ. ಇದನ್ನು ಗಂಭೀರವಾಗಿ ಪರಿಗಣಿಸದ ರಾಮಚಂದ್ರ ಅವರು ಮನೆಗೆ ತೆರಳಿದ್ದರು. ಸಂಜೆಯಾಗುತ್ತಲೇ ಅವರ ದೇಹದ ಆರೋಗ್ಯದಲ್ಲಿ ಏರುಪೇರಾಗಿತ್ತು ಎನ್ನಲಾಗಿದೆ. ಆರೋಗ್ಯ ಪರಿಸ್ಥಿತಿ ಹದಗೆಡುತ್ತಿದ್ದಂತೆ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಇಂದು ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.