ಪಾಟ್ನಾ: ಹಾವೆಂದರನೇ ಭಯ ಬೀಳುವ ಜನಕ್ಕೆ ಹಾವು ಕಚ್ಚಿತೆಂದರೆ ಹೇಗಾಗಿರಬೇಡ? ಆದರೆ ಇಲ್ಲೊಬ್ಬ ಭಂಡ ಧೈರ್ಯದ ವ್ಯಕ್ತಿ ತನಗೆ ಕಚ್ಚಿದ ಹಾವನ್ನು ಕಚ್ಚಿ ಸಾಯಿಸಿದ್ದಾನೆ. ಆದರೆ ಹಾವು ಕಚ್ಚಿದ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಬಿಹಾರದ ನವಾಡ ಪ್ರದೇಶದ ರೈಲ್ವೆ ಉದ್ಯೋಗಿಯಾದ ಸಂತೋಷ್ ಲೋಹರ್ ಎಂಬಾತನೇ ಈ ಕೃತ್ಯ ಎಸಗಿ ಬದುಕುಳಿದಿದ್ದಾನೆ. ರೈಲ್ವೆ ಕಾಮಗಾರಿ ನಡೆಯುತ್ತಿದ್ದ ವೇಳೆ ಇತರ ಕಾರ್ಮಿಕರೊಂದಿಗೆ ಸಂತೋಷ್ ನವಾಡ ಅರಣ್ಯ ಪ್ರದೇಶದಲ್ಲಿ ಉಳಿದುಕೊಂಡಿದ್ದ. ಮಂಗಳವಾರ ರಾತ್ರಿ ಊಟ ಮಾಡಿ ಮಲಗಿದ್ದ ಸಂತೋಷ್‌ಗೆ ಅರಣ್ಯದಲ್ಲಿದ್ದ ಹಾವೊಂದು ಕಚ್ಚಿದೆ. ಕಚ್ಚಿದ ಹಾವನ್ನು ತಿರುಗಿ ಕಚ್ಚಿದರೆ ಮೈಯಲ್ಲಿದ್ದ ವಿಷ ಹಾವಿಗೆ ಹಿಂದಿರುಗುತ್ತದೆ ಎಂಬುದು ಅಲ್ಲಿನ ಜನರ ನಂಬಿಕೆ. ಅದರಂತೆ ಸಂತೋಷ್ ತನಗೆ ಕಚ್ಚಿದ ಹಾವನ್ನು ಹಿಡಿದು ಅದಕ್ಕೆ ಎರಡು ಬಾರಿ ಕಚ್ಚಿದ್ದಾನೆ. ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸಂತೋಷ್ ಗುಣ ಮುಖನಾಗಿ ಈಗ ಮನೆಗೆ ಬಂದಿದ್ದಾರೆ. ಆದರೆ ಆತ ಕಚ್ಚಿದ ಹಾವು ಮಾತ್ರ ಅಲ್ಲೇ ಸಾವನ್ನಪ್ಪಿದೆ. ಹಾಗಂತ ಅವರ ನಂಬಿಕೆಯಂತೆ ಆತ ಬದುಕುಳಿದಿದ್ದಲ್ಲ, ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರಿಂದ ಆಸ್ಪತ್ರೆಯಲ್ಲಿ ವೈದ್ಯರ ಚಿಕಿತ್ಸೆಯಿಂದ ಆತ ಬದುಕುಳಿದಿದ್ದಾನೆ. ಹೀಗಾಗಿ ಯಾರೂ ಇಂತಹ ದುಸ್ಸಾಹಸಕ್ಕೆ ಕೈ ಹಾಕುವುದು ಬೇಡ.