ಮುಂಬೈ: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಗೆ 2018ರಲ್ಲಿ ಬೇಹುಗಾರಿಕೆ ನಡೆಸಿ ಬಂಧಿತನಾಗಿದ್ದ ಬ್ರಹ್ಮೋಸ್ ಏರೋಸ್ಪೇಸ್ ಪ್ರೈವೆಟ್ ಲಿಮಿಟೆಡ್‌ನ ಮಾಜಿ ಎಂಜಿನಿಯರ್ ನಿಶಾಂತ್ ಅಗರ್ವಾಲ್‌ಗೆ ಇಂದು ಜೀವಾವಧಿ ಶಿಕ್ಷೆ ಮತ್ತು 30,000 ರೂ. ದಂಡ ವಿಧಿಸಲಾಗಿದೆ. ನಾಗ್ಪುರದ ನ್ಯಾಯಾಲಯ ಈ ಶಿಕ್ಷೆಯನ್ನು ವಿಧಿಸಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆದಿತ್ತು. ಈ ವೇಳೆ ನಿಶಾಂತ್ ಅಪರಾಧ ಕೃತ್ಯದಲ್ಲಿ ಪಾಲ್ಗೊಂಡಿದ್ದುದು ಸಾಬೀತಾಗಿತ್ತು. ಐಟಿ ಕಾಯ್ದೆ ಹಾಗೂ ಭಾರತದ ಅಧಿಕೃತ ರಹಸ್ಯ ಕಾಯ್ದೆಯನ್ವಯ ಹಾಗೂ ಸಿಆರ್‌ಪಿಸಿಯಡಿ ಎಸಗಿದ ಕೃತ್ಯಗಳಿಗಾಗಿ ನಿಶಾಂತ್ ಅಗರ್ವಾಲ್‌ನನ್ನು ದೋಷಿ ಎಂದು ಗುರುತಿಸಲಾಗಿದೆ.
ನಾಗ್ಪುರದಲ್ಲಿರುವ ಬ್ರಹ್ಮೋಸ್ ಏರೋಸ್ಪೇಸ್‌ನ ತಾಂತ್ರಿಕ ಸಂಶೋಧನಾ ವಿಭಾಗದಲ್ಲಿ ನಿಶಾಂತ್ ನಾಲ್ಕು ವರ್ಷ ಹಿರಿಯ ಸಿಸ್ಟಮ್ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸಿದ್ದ. ಆತನ ವಿರುದ್ಧ ಐಎಸ್‌ಐಗೆ ಮಾಹಿತಿ ಸೋರಿಕೆ ಮಾಡಿದ ಬಗ್ಗೆ ಆರೋಪವಿತ್ತು.