ಆಸ್ಟ್ರೇಲಿಯಾ: ಟೀಮ್ ಇಂಡಿಯಾದ ಲೆಜೆಂಡರಿ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಗಬ್ಬಾದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡ ಬೆನ್ನಲ್ಲೇ ಅನುಭವಿ ಸ್ಪಿನ್ನರ್ ಈ ನಿರ್ಧಾರ ತೆಗೆದುಕೊಳ್ಳುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.
ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯ ಉಳಿದ ಪಂದ್ಯಗಳನ್ನು ಆಡಲು ನಿರ್ಧರಿಸಿರುವುದರಿಂದ ಅಶ್ವಿನ್ ನಾಳೆ (ಗುರುವಾರ) ಭಾರತಕ್ಕೆ ಮರಳಲಿದ್ದಾರೆ. ʻಭಾರತ ತಂಡದ ಪರ ಇದು ನನ್ನ ಕೊನೆಯ ದಿನವಾಗಿದೆ.
ಟೀಮ್ ಇಂಡಿಯಾದ ಜೊತೆಗಿನ ಸುದೀರ್ಘ ಬಾಂಧವ್ಯವನ್ನು ಕಳೆದುಕೊಳ್ಳುತ್ತಿರುವುದಕ್ಕೆ ನನ್ನ ಮನಸ್ಸಿಗೆ ಸ್ವಲ್ಪಮಟ್ಟಿಗಿನ ನೋವಾಗಿದೆ. ಆದರೆ ಕ್ಲಬ್ ಕ್ರಿಕೆಟ್‌ನಲ್ಲಿ ನಾನು ಮುಂದುವರೆಯುತ್ತೇನೆ’ ಎಂದು ಅಶ್ವಿನ್ ತಿಳಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ Xನಲ್ಲಿ ಪೋಸ್ಟ್ ಮೂಲಕ ಬಿಸಿಸಿಐ ಸ್ಪಿನ್ ದಿಗ್ಗಜನ ಅದ್ಭುತ ವೃತ್ತಿಜೀವನ ಹಾಗೂ ಕ್ರಿಕೆಟ್‌ಗೆ ಅವರು ನೀಡಿರುವ ಕೊಡುಗೆಯನ್ನು ಶ್ಲಾಘಿಸಿದೆ. ʻʻಧನ್ಯವಾದ ಅಶ್ವಿನ್. ಪಾಂಡಿತ್ಯ, ಮಾಂತ್ರಿಕತೆ, ತೇಜಸ್ಸು ಮತ್ತು ನಾವೀನ್ಯತೆಗೆ ಸಮಾನಾರ್ಥಕವಾದ ಹೆಸರು. ಸ್ಪಿನ್ನರ್ ಮತ್ತು ಟೀಮ್ ಇಂಡಿಯಾದ ಅಮೂಲ್ಯ ಆಲ್‌ರೌಂಡರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಲೆಜೆಂಡರಿ ವೃತ್ತಿಜೀವನಕ್ಕೆ ಅಭಿನಂದನೆಗಳು” ಎಂದು ಬಿಸಿಸಿಐ ಪೋಸ್ಟ್ ಮಾಡಿದೆ.