ಮಂಗಳೂರಿನ ಮುಕ್ಕದಲ್ಲಿರುವ ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯಲ್ಲಿ ಅಂತರರಾಷ್ಟ್ರೀಯ ಖ್ಯಾತಿಯ ಮಾತಾ ಅಮೃತಾನಂದಮಯಿ ಮಠದ ಸಹಭಾಗಿತ್ವದಲ್ಲಿ “ಜರ್ನಿ ಟವರ್ಡ್ಸ್ ದಿ ಇನ್ನರ್ ವರ್ಲ್ಡ್” (ಆಂತರಿಕ ಪ್ರಪಂಚದ ಕಡೆಗೆ ಪ್ರಯಾಣ) ಮತ್ತು “ಫ್ಲ್ಯೂಟ್ ಮೆಡಿಟೇಶನ್” (ಕೊಳಲು ಧ್ಯಾನ) ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಮಾತಾ ಅಮೃತಾನಂದಮಯಿ ಮಠದ ಅಂತರರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು, ಅಂತರರಾಷ್ಟ್ರೀಯ ಖ್ಯಾತಿಯ ಆಧ್ಯಾತ್ಮಿಕ ಗುರುಗಳಾದ ಸಂಪೂಜ್ಯಾ ಸ್ವಾಮಿ ಪೂರ್ಣಾಮೃತಾನಂದ ಪುರಿಹಾಗೂಮಂಗಳೂರಿನ ಮಾತಾ ಅಮೃತಾನಂದಮಯಿ ಮಠದ ಮುಖ್ಯಸ್ಥರಾದ ಸ್ವಾಮಿನಿ ಮಂಗಳಾಮೃತ ಪ್ರಾಣ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಅನಿಲ್ ಕುಮಾರ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.
ಉದ್ಘಾಟನಾ ಭಾಷಣವನ್ನು ಮಾಡಿದ ಮುಖ್ಯ ಅತಿಥಿ ಸಂಪೂಜ್ಯಾ ಸ್ವಾಮಿ ಪೂರ್ಣಾಮೃತಾನಂದ ಪುರಿ ಯವರು ಮಾತನಾಡಿ, ಜೀವನದಲ್ಲಿ ಆಧ್ಯಾತ್ಮಿಕ ಜ್ಞಾನದ ಅವಶ್ಯಕತೆ ಮತ್ತು ಅಭ್ಯಾಸಗಳ ಕುರಿತು ಸಮಗ್ರ ಮಾಹಿತಿಯನ್ನು ನೀಡಿದರು. ಬಳಿಕ, ಸ್ವಾಮೀಜಿಯವರು, ಸುಶ್ರಾವ್ಯವಾಗಿ ಕೊಳಲನ್ನು ನುಡಿಸುವುದರ ಮೂಲಕ ವಿಶ್ರಾಂತಿ ಕಲೆ ಮತ್ತು ಧ್ಯಾನ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ನಂತರ, ಪೂಜ್ಯ ಸ್ವಾಮೀಜಿಯವರು, ವಿದ್ಯಾರ್ಥಿಗಳೊಂದಿಗೆ ಆಧ್ಯಾತ್ಮಿಕ ಜ್ಞಾನ, ವ್ಯಕ್ತಿತ್ವ ವಿಕಸನ ಮತ್ತು ಮಹಿಳಾ ಸಬಲೀಕರಣದ ಕುರಿತು ಸಂವಾದವನ್ನು ನಡೆಸಿದರು.
ಸ್ವಾಮಿನಿ ಮಂಗಳಾಮೃತ ಪ್ರಾಣ ರವರು ಮಾತನಾಡಿ, ಮಾತಾ ಅಮೃತಾನಂದಮಯಿ ಮಠದ ವತಿಯಿಂದ ದೇಶ ವಿದೇಶಗಳಲ್ಲಿ ಆಯೋಜಿಸುತ್ತಿರುವ ವಿವಿಧ ಸೇವಾ ಕಾರ್ಯಕ್ರಮಗಳ ಕುರಿತು ಮಾಹಿತಿಯನ್ನು ನೀಡಿದರು.
ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ಪ್ರಾಂಶುಪಾಲರಾದ ಡಾ. ರಾಮಕೃಷ್ಣ ಎನ್ ಹೆಗಡೆ ಯವರು ಭಕ್ತಿಪೂರ್ವಕವಾಗಿ ಪೂಜ್ಯ ಸ್ವಾಮೀಜಿ ಹಾಗೂ ಪೂಜ್ಯ ಸ್ವಾಮಿನಿಯವರನ್ನು ವೇದಿಕೆಗೆ ಬರಮಾಡಿಕೊಂಡು ಗೌರವಿಸಿದರು.
ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಗೌರವ ಅಧ್ಯಕ್ಷರು ಹಾಗೂ ಮಂಗಳೂರಿನ ಖ್ಯಾತ ವೈದ್ಯರಾದ ಡಾ. ಜೀವರಾಜ್ ಸೊರಕೆ, ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀ ಸುರೇಶ್ ಅಮೀನ್, ಸೇವಾ ಸಮಿತಿಯ ಪ್ರಮುಖರಾದ ಶ್ರೀಮತಿ ಶ್ರುತಿ ಹೆಗ್ಡೆ, ಶ್ರೀ ಕೃಷ್ಣ ಶೆಟ್ಟಿ, ಶ್ರೀ ಭೋಜರಾಜ್, ಶ್ರೀ ದಿನಕರ ಮುಕ್ಕ, ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಹಾಗೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಅಸಂಖ್ಯಾತ ಭಕ್ತಾಭಿಮಾನಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಚಾಲಕರಾದ ಪ್ರೊ. ಕೆ. ಶ್ರೀನಾಥ್ ರಾವ್ ರವರು ಪೂಜ್ಯ ಸ್ವಾಮೀಜಿಯವರನ್ನು, ಪೂಜ್ಯ ಸ್ವಾಮಿನಿಯವರನ್ನು ಮತ್ತು ಆಗಮಿಸಿದ ಭಕ್ತಾಭಿಮಾನಿಗಳನ್ನು ಸ್ವಾಗತಿಸಿದರು ಹಾಗೂ ಕಾರ್ಯಕ್ರಮದ ಕಿರುಪರಿಚಯವನ್ನು ನೀಡಿದರು. ಕುಮಾರಿ ಜಸ್ಮಿತಾ ನಾಯ್ಕ್ ರವರು ಪೂಜ್ಯ ಸ್ವಾಮೀಜಿಯವರನ್ನು ಹಾಗೂ ಪೂಜ್ಯ ಸ್ವಾಮಿನಿಯವರನ್ನು ಸಭೆಗೆ ಪರಿಚಯಿಸಿದರು. ಪ್ರೊ ಪಿ. ನವೀನ್ ರವರು ವಂದನಾರ್ಪಣೆ ಸಲ್ಲಿಸಿದರು. ಕುಮಾರಿ ಅನನ್ಯಾ ಎಂ. ಗೌಡ ರವರು ಕಾರ್ಯಕ್ರಮವನ್ನು ನಿರೂಪಿಸಿದರು.