ಉಜಿರೆ: ಆಧ್ಯಾತ್ಮವೇ ಭಾರತದ ಆತ್ಮವಾಗಿದ್ದು ಪರಿಶುದ್ಧ ಶ್ರದ್ಧಾ-ಭಕ್ತಿಯಿಂದ ದೇವರ ಸೇವೆ ಮಾಡಿದಾಗ ಸರ್ವಶಕ್ತನಾದ ಭಗವಂತನು ನಮ್ಮ ಎಲ್ಲಾ ಕಷ್ಟಗಳನ್ನು ಪರಿಹರಿಸುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಹೇಳಿದರು.
ಅವರು ಬೆಳ್ತಂಗಡಿ ತಾಲ್ಲೂಕಿನ ಸವಣಾಲು ಗ್ರಾಮದಲ್ಲಿರುವ ಭಗವಾನ್ ಆದಿನಾಥಸ್ವಾಮಿ ಬಸದಿಯಲ್ಲಿ ಭಾನುವಾರ ಧಾಮ ಸಂಪ್ರೋಕ್ಷಣ ಸಂದರ್ಭದಲ್ಲಿ ಆಯೋಜಿಸಿದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಎಲ್ಲರಲ್ಲಿಯೂ ದೇವರನ್ನು ಕಂಡು ಗೌರವಿಸುವ ಸಂಸ್ಕೃತಿ ನಮ್ಮದಾಗಿದೆ. ನಂಬಿಕೆಗಿಂತಲೂ ಜಿಜ್ಞಾಸೆ ಹಾಗೂ ಅನ್ವೇಷಣಾ ಪ್ರವೃತ್ತಿಯಿಂದಾಗಿ ಕಷ್ಟ ಬಂದಾಗ ಆರ್ತರಾಗಿ ಪರಿಹಾರಕ್ಕಾಗಿ ನಾವು ದೇವರ ಭಕ್ತಿ ಮಾಡುತ್ತೇವೆ. ದೇವರ ಅನುಗ್ರಹದಿಂದ ನಮ್ಮ ಇಷ್ಟಾರ್ಥಗಳು ಈಡೇರುತ್ತವೆ. ಕರ್ಮ ಸಿದ್ಧಾಂತವನ್ನು ನಂಬುವ ನಾವು ತಾಳ್ಮೆಯಿಂದ ಧರ್ಮದ ಮರ್ಮವನ್ನರಿತು ಆಚರಿಸಿದಾಗ ಜೀವನ ಪಾವನವಾಗುತ್ತದೆ.
ನಮ್ಮ ಹಿರಿಯರು, ಸಾಧು-ಸಂತರು ಇದನ್ನು ಸಾಧಿಸಿ ತೋರಿಸಿದ್ದಾರೆ ಎಂದು ಹೇಳಿದ ಅವರು ಜೈನರ ತ್ಯಾಗ, ಅಹಿಂಸೆ, ಅಪರಿಗ್ರಹ ಮೊದಲಾದ ತತ್ವ-ಸಿದ್ಧಾಂತಗಳಿಂದ ಶಾಂತಿ-ಸಾಮರಸ್ಯದ ಬದುಕು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಪಡುಬಿದ್ರೆ ಬೀಡು ರತ್ನಾಕರ ರಾಜ್ ಅರಸು, ರಕ್ಷಿತ್ ಶಿವರಾಂ, ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಶುಭಾಶಂಸನೆ ಮಾಡಿದರು.
ವಿಶಿಷ್ಠ ಸೇವೆ-ಸಾಧನೆ ಮಾಡಿದ ವೇಣೂರಿನ ಪ್ರವೀಣಕುಮಾರ್ ಇಂದ್ರ ಮತ್ತು ಉಜಿರೆಯ ಸುರೇಶ್‌ಕುಮಾರ್ ಅವರನ್ನು ಗೌರವಿಸಲಾಯಿತು. ಪ್ರತಿಷ್ಠಾಚಾರ್ಯರಾದ ಬೆಳ್ತಂಗಡಿಯ ಕೆ. ಜಯರಾಜ ಇಂದ್ರ, ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಬಿ. ರಾಜಶೇಖರ ಅಜ್ರಿ, ಬಸದಿ ಸಮಿತಿಯ ಕೋಶಾಧಿಕಾರಿ ಚಾಮರಾಜ ಸೇಮಿತ, ವೃಷಭರಾಜ ಇಂದ್ರ ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ ಅಳದಂಗಡಿ ಅರಮನೆಯ ಡಾ. ಪದ್ಮಪ್ರಸಾದ ಅಜಿಲ ಮಾತನಾಡಿ, ಸ್ವಧರ್ಮದಲ್ಲಿ ಜೀವಿಸಿ, ಪರಧರ್ಮವನ್ನು ಪ್ರೀತಿಸುವ ಜೈನರು ಗುಣಗಳ ಆರಾಧಕರಾಗಿದ್ದು ಸರ್ವಧರ್ಮೀಯರೊಂದಿಗೂ ಶಾಂತಿ-ಸಾಮರಸ್ಯದ ಜೀವನ ನಡೆಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಬಸದಿಯ ಸೇವೆಯಲ್ಲಿ ಜನರ ಶ್ರದ್ಧಾ-ಭಕ್ತಿಯ ಪರಿಶ್ರಮವನ್ನು ಶ್ಲಾಘಿಸಿ, ಅಭಿನಂದಿಸಿದರು. ಕಿಶೋರ್‌ಹೆಗ್ಡೆ ಎರ್ಮೆತ್ತೋಡಿಗುತ್ತು ಸ್ವಾಗತಿಸಿದರು. ಮುಂಡೂರುಗುತ್ತು ಆಕರ್ಷ್ ಜೈನ್ ಧನ್ಯವಾದವಿತ್ತರು. ಅಜಿತ್ ಕೊಕ್ರಾಡಿ ಕಾರ್ಯಕ್ರಮ ನಿರ್ವಹಿಸಿದರು.
ಧಾರ್ಮಿಕ ವಿಧಿ-ವಿಧಾನಗಳು: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವೀ. ಹೆಗ್ಗಡೆಯವರು ಹಾಗೂ ಕುಟುಂಬಸ್ಥರು ಭಾನುವಾರದ ಪೂಜೆಯ ಸೇವಾಕರ್ತೃಗಳಾಗಿ ಪುಣ್ಯಭಾಗಿಗಳಾದರು.
ಭಗವಾನ್ ಆದಿನಾಥ ಸ್ವಾಮಿಯ ಪ್ರತಿಷ್ಠೆ, ಶಿಖರಾರೋಹಣ, ಭಕ್ತಾಮರ ಆರಾಧನೆ, 108 ಕಲಶ ಅಭಿಷೇಕದ ಬಳಿಕ ಮಹಾಪೂಜೆ ನಡೆಯಿತು. ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ, ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆಯವರು ಮತ್ತು ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು. ನಿರೀಕ್ಷಾ ಜೈನ್ ಹೊಸ್ಮಾರು ಇವರು ಸುಶ್ರಾವ್ಯ ಗಾಯನ ಕಾರ್ಯಕ್ರಮಕ್ಕೆ ವಿಶೇಷ ಮೆರುಗನ್ನು ನೀಡಿತು.
