Sunday, July 14, 2024
Homeಧಾರ್ಮಿಕಶ್ರೀ ಬೊಬ್ಬರ್ಯ ಪರಿವಾರ ದೇವರ ಪುನರ್ ಪ್ರತಿಷ್ಠೆ ನೂತನ ಶಿಲಾಮಯ ದೇಗುಲ ಲೋಕಾರ್ಪಣೆ

ಶ್ರೀ ಬೊಬ್ಬರ್ಯ ಪರಿವಾರ ದೇವರ ಪುನರ್ ಪ್ರತಿಷ್ಠೆ ನೂತನ ಶಿಲಾಮಯ ದೇಗುಲ ಲೋಕಾರ್ಪಣೆ

ಕುಂದಾಪುರ: ಬೈಂದೂರು ತಾಲೂಕಿನ ನಾಗೂರು ಕಿರಿಮಂಜೇಶ್ವರ ಗುಂಜಾನುಗುಡ್ಡೆ ಶ್ರೀ ಬೊಬ್ಬರ್ಯ ಪರಿವಾರ ದೇವರ ಪುನರ್ ಪ್ರತಿಷ್ಠೆ,ನೂತನ ಶಿಲಾಮಯ ದೇಗುಲ ಲೋಕಾರ್ಪಣೆ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸೋಮವಾರ ನಡೆಯಿತು. ಶ್ರೀಬೊಬ್ಬಯ ಮತ್ತು ಪರಿವಾರ ದೇವರ ಪುನರ್ ಪ್ರತಿಷ್ಠೆ ಅಂಗವಾಗಿ ಬಿಂಬ ಪ್ರತಿಷ್ಠೆ,ಕುಂಭ ಅಭಿಷೇಕ, ಅಷ್ಟೋತ್ತರ ಕಲಶ ಸ್ಥಾಪನೆ, ಬ್ರಹ್ಮಕಲಶ ಸ್ಥಾಪನೆ, ಮಹಾ ಪೂಜೆ, ಪರಿ ಕಲಶ ಸಹಿತ ಬ್ರಹ್ಮಕಲಾಶಾಭೀಷೇಕವನ್ನು ನೆರವೇರಿಸಲಾಯಿತು. ಮಹಾ ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ಶ್ರೀ ಬೊಬ್ಬರ್ಯ ದೈವಸ್ಥಾನ ನಿರ್ಮಾಣಕ್ಕೆ ಸ್ಥಳದಾನ ಮಾಡಿದವರನ್ನು ಮತ್ತು ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಾಂದೀಪನಿ ಸಾಧನಾಶ್ರಮ ಶ್ರೀಕ್ಷೇತ್ರ ಕೇಮಾರು ಶ್ರೀ ಪರಮ ಪೂಜ್ಯ ಈಶವಿಠಲದಾಸ ಸ್ವಾಮಿ ಅವರು ಆಶೀರ್ವಚನಾ ನೀಡಿ ಮಾತನಾಡಿ, ಪಾಶ್ಚಿಮಾತ್ಯ ದೇಶದ ಸಂಸ್ಕೃತಿಗೆ ಮಾರುಹೋಗದೆ ನಮ್ಮ ದೇಶದ ಸಂಸ್ಕೃತಿಯನ್ನು ಅಳವಡಿಸಿಕೊಂಡು ಬದುಕುವುದರಿಂದ ಸಂಸ್ಕಾರಯುತವಾದ ಬದುಕನ್ನು ಕಂಡುಕೊಳ್ಳಬಹುದಾಗಿದೆ. ಮಾತೃ ಭಾಷಾ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಬೇಕೆಂದು ಹೇಳಿದರು.

ಧಾರ್ಮಿಕ ಮುಖಂಡ ಅಪ್ಪಣ್ಣ ಹೆಗ್ಡೆ ಅವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಊರಿನಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಆಯೋಜನೆ ಮಾಡುವುದರಿಂದ ಸಂಘಟಿತರಾಗಿ ಬದುಕುವುದರ ಜತೆಗೆ, ಧರ್ಮ ಜಾಗೃತಿಯ ಕುರಿತು ಅರಿವನ್ನು ಮೂಡಿಸಿದಂತಾಗುತ್ತದೆ ಎಂದರು.

ಕೊಲ್ಲೂರು ದೇವಳದ ಮಾಜಿ ಧರ್ಮದರ್ಶಿಗಳಾದ ಮಂಜುನಾಥ ಭಟ್ ಉಪ್ರಳ್ಳಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಒಳ್ಳೆ ಮನಸು ಮತ್ತು ಪರಿಶ್ರಮ ನಮ್ಮ ಜೊತೆ ಇದ್ದರೆ ಎಂತಹ ಸಂದರ್ಭವನ್ನು ಕೂಡ ಸುಲಭವಾಗಿ ಎದುರಿಸಬಹುದಾಗಿದೆ ಎನ್ನುವುದಕ್ಕೆ ಬೊಬ್ಬರ್ಯ ದೇವಸ್ಥಾನದ ನಿರ್ಮಾಣವೆ ಸಾಕ್ಷಿ ಎಂದರು.

ನಾರಾಯಣ ಹೆಬ್ಬಾರ್ ಮಾತನಾಡಿ, ಶ್ರೀಬೊಬ್ಬರ್ಯ ದೇವರ ದೇವಸ್ಥಾನವನ್ನು 40 ವರ್ಷಗಳ ಹಿಂದೆ ನಿರ್ಮಾಣಮಾಡಲಾಗಿದೆ. ನಾಲ್ಕು ದಶಕಗಳ ಬಳಿಕ ಶ್ರೀದೇವರ ಅನುಗ್ರಹದಿಂದ ನೂತನ ಶಿಲಾಮಯ ದೇಗುಲವನ್ನು ನಿರ್ಮಿಸಲಾಗಿದ್ದು ಎಲ್ಲವೂ ದೇವರೆ ಮಾಡಿಸಿಕೊಂಡಿದ್ದಾನೆ ಎಂದು ಹೇಳಿದರು.

ದೇವಸ್ಥಾನದ ಸದಸ್ಯರಾದ ರಾಜು.ಎನ್ ದೇವಾಡಿಗ ಮಾತನಾಡಿ, ಬಹಳಷ್ಟು ಇತಿಹಾಸವನ್ನು ಹೊಂದಿರುವ ಅಜೀರ್ಣಾವಸ್ಥೆಯಲ್ಲಿದ್ದ ಶ್ರೀಬೊಬ್ಬರ್ಯ ದೇವಸ್ಥಾನವನ್ನು ದಾನಿಗಳು ಮತ್ತು ಊರವರ ಸಹಕಾರದಿಂದ ಜೀರ್ಣೋದ್ಧಾರ ಗೊಳಿಸಲಾಗಿದೆ. ಕೇವಲ ಮೂರು ತಿಂಗಳ ಅವಧಿಯಲ್ಲಿ ಶಿಲಾಮಯ ದೇಗುಲವನ್ನು ನಿರ್ಮಿಸಲಾಗಿದ್ದು ಎಲ್ಲವೂ ದೇವರ ಕೃಪೆಯಿಂದಲೆ ಸಾಧ್ಯವಾಗಿದೆ. ಶ್ರೀದೇವರ ಬ್ರಹ್ಮಕಲಶೋತ್ಸವವನ್ನು ನಡೆದಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ ಎಂದರು.

ಪ್ರಕಾಶ ಐತಾಳ್ ಅವರು ಮಾತನಾಡಿ, ಹಣಬಿನ ಸೇವೆ ಶ್ರೀಬೊಬ್ಬರ್ಯ ದೇವರಿಗೆ ಅತ್ಯಂತ ಇಷ್ಟವಾದ ಸೇವೆ ಆಗಿದೆ. ಮಹಾಶಿವರಾತ್ರಿ ಯಂದು ಊರವರು ಎಲ್ಲಾ ಒಟ್ಟಿಗೆ ಸೇರಿ ಹಣಬಿನ ಸೇವೆಯನ್ನು ನೆರವೇರಿಸುತ್ತಾರೆ ಎಂದರು.

ಈ ಸಂದರ್ಭದಲ್ಲಿ ದೈವಸ್ಥಾನಕ್ಕೆ ಸ್ಥಳದಾನ ಮಾಡಿದವರು ವಸಂತ್ ಬಡಾಲ ಮತ್ತು ಮೋಹನ್ ಡಿ ರಾವ್ ತ್ರಾಸಿ,ಪ್ರಕಾಶ್ಚಂದ್ರ ಶೆಟ್ಟಿ, ವಾಸುದೇವ ಕಾರಂತ, ಶ್ರೀಧರ್ ಹೆಬ್ಬಾರ್, ನರಸಿಂಹ ಹಳಗೇರಿ, ನಾಗೇಶ್ ಜೋಗಿ, ಸೇವಾ ಸಮಿತಿ ಸದಸ್ಯರು, ಗ್ರಾಮಸ್ಥರು, ಭಕ್ತಾದಿಗಳು ಉಪಸ್ಥಿತರಿದ್ದರು.

ರಾಜು ಎನ್ ದೇವಾಡಿಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಈಶ್ವರ ದೇವಾಡಿಗ ಚಿತ್ರಾಡಿ ನಿರೂಪಿಸಿದರು. ಜ್ಯೋತಿಷಿ ವಿದ್ವಾನ್ ನೀಲಾವರ ರಘುರಾಮ ಮಧ್ಯಸ್ಥರು ಮಾರ್ಗದರ್ಶನದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.

RELATED ARTICLES
- Advertisment -
Google search engine

Most Popular