ಕಾಸರಗೋಡು: ಶ್ರೀ ಧರ್ಮಸ್ಥಳ ಭಜನಾ ಪರಿಷತ್ ಕಾಸರಗೋಡು ತಾಲೂಕಿನ ವಿಶೇಷ ಸಭೆಯನ್ನು ಭಜನಾ ಪರಿಷತ್ ಅಧ್ಯಕ್ಷರಾದ ಶ್ರೀ ಕೆ.ಎನ್. ವೆಂಕಟರಮಣ ಹೊಳ್ಳ ಅರವರ ಅಧ್ಯಕ್ಷತೆಯಲ್ಲಿ ನಡೆಯಿತು. ಶ್ರೀ ಧರ್ಮಸ್ಥಳ ಭಜನಾ ಪರಿಷತ್ತಿನ ಉಡುಪಿ ಸಮನ್ವಯಾಧಿಕಾರಿ ಶ್ರೀ ರಾಘವೇಂದ್ರರವರು ಭಾಗವಹಿಸಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸೆಪ್ಟಂಬರ್ 22 ರಿಂದ 29 ರವರೆಗೆ 8 ದಿವಸಗಳವರೆಗೆ ನಡೆಯಲಿರುವ ಭಜನಾ ಕಮ್ಮಟದ ಬಗ್ಗೆ ಹಾಗೂ ಭಜನಾ ಮಂಗಳೋತ್ಸವದ ಬಗ್ಗೆ ಮಾಹಿತಿ ನೀಡಿದರು. ಈ ಸಭೆಯಲ್ಲಿ ಭಜನಾ ಸಂಕೀರ್ತನೆಗಾರರಾದ ಹರಿದಾಸರಾದ ಶ್ರೀ ಜಯಾನಂದ ಕುಮಾರ್ ಹೊಸದುರ್ಗ ಅವರು ಕಾಸರಗೋಡಿನಲ್ಲಿ ಭಜನಾ ಪರಿಷತ್ತು ನಡೆದು ಬಂದ ರೀತಿ ಹಾಗೂ ಭಜನಾ ಮಂಡಳಿಗಳ ಸಹಕಾರದ ಬಗ್ಗೆ ವಿವರಿಸಿದರು. ಸಭೆಯಲ್ಲಿ ವಾರ್ಡ್ ಸದಸ್ಯೆ ಶ್ರೀಲತಾ,ಪೇಟೆ ಶ್ರೀ ವೆಂಕಟರಮಣ ಮಹಿಳಾ ಭಜನಾ ಮಂಡಳಿಯ ಅಧ್ಯಕ್ಷೆ ವಿಜಯ ಶೆಟ್ಟಿ, ಭಜನಾ ಸಾಮ್ರಾಟ್ ಮೋಹನ್ ಆಚಾರ್ಯ ಪುಳ್ಕೂರು, ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯಾಧಿಕಾರಿ ಶ್ರೀ ಸಂತೋಷ್ ಪಿ ಅಳಿಯೂರು, ಉಪಸ್ಥಿತರಿದ್ದರು.
ಸಭೆಯಲ್ಲಿ ಕಾಸರಗೋಡು ತಾಲೂಕು ಧರ್ಮಸ್ಥಳ ಭಜನಾ ಪರಿಷತ್ತಿನ ಶಾಶ್ವತ ಸಮಿತಿ ರಚನೆ, ವರ್ಷದಲ್ಲಿ ನಾಲ್ಕು ಸಮಿತಿ ಸಭೆಗಳ ಆಯೋಜನೆ, ಕ್ಷೇತ್ರದಲ್ಲಿ ನಡೆಯುವ ಭಜನಾ ಕಮ್ಮಟಕ್ಕೆ ಕನಿಷ್ಠ ಐದು ಮಂಡಳಿಗಳಿಂದ 10 ಶಿಬಿರಾರ್ಥಿಗಳನ್ನು ಕಳುಹಿಸಿ ಕೊಡುವುದು, ಕಮ್ಮಟದ ಭಜನಾ ಮಂಗಳೋತ್ಸವದ ದಿವಸ ಹತ್ತಕ್ಕಿಂತ ಹೆಚ್ಚು ಭಜನಾ ಮಂಡಳಿಗಳನ್ನು ಕಳುಹಿಸಿ ಕೊಡುವುದು, ಒಟ್ಟಿನಲ್ಲಿ ಕಾಸರಗೋಡು ಭಜನಾ ಪರಿಷತ್ತನ್ನು ಕ್ರಿಯಾಶೀಲಗೊಳಿಸುವ ಬಗ್ಗೆ ಹಾಗೂ ಇದುವರೆಗಿನ ಭಜನಾ ಪರಿಷತ್ತಿನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮೀರಾ ಗಟ್ಟಿಯವರ ಬದಲಿಗೆ ಅವರ ಒಪ್ಪಿಗೆಯಂತೆ ಮುಂದಿನ ಸಮಿತಿ ರಚನೆಯವರೆಗೆ ಪದ್ಮನಾಭ ಆಚಾರ್ಯರವರನ್ನು ಕಾರ್ಯದರ್ಶಿಯನ್ನಾಗಿ ನೇಮಿಸುವ ಬಗ್ಗೆ ನಿರ್ಣಯಿಸಲಾಯಿತು. ತಾಲೂಕು ಯೋಜನಾಧಿಕಾರಿ ಮುಖೇಶ್ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು ಭಜನಾ ಪರಿಷತ್ತಿನ ನೂತನ ಕಾರ್ಯದರ್ಶಿ ಪದ್ಮನಾಭ ಆಚಾರ್ಯ ವಂದಿಸಿದರು.