ಬೈಂದೂರು:ಹದಿನಾರು ಮಾಗಣೆಯ ಒಡೆಯನಾದ ಕುಂದಾಪುರ ತಾಲೂಕಿನ ಕುಂದಬಾರಂದಾಡಿ ಗ್ರಾಮದ ಮಾಣಿಕೊಳಲು ಶ್ರೀಲಕ್ಷ್ಮೀ ಚೆನ್ನಕೇಶವ ದೇವರ ಶ್ರೀಮನ್ಮಹಾರಥೋತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ವೈಭವದಿಂದ ಬುಧವಾರ ನಡೆಯಿತು. ಭಕ್ತಿಭಾವದಿಂದ ಭಕ್ತಾದಿಗಳು ರಥವನ್ನು ಎಳೆದರು. ಚಂಡೆ ವಾದನ, ವಾದ್ಯಘೋಷ ರಥೋತ್ಸವದ ಸೊಬಗನ್ನು ಹೆಚ್ಚಿಸಿತು.
ಶ್ರೀ ಲಕ್ಷ್ಮೀಚೆನ್ನಕೇಶವ ದೇವರ ಮನ್ಮಹಾರಥೋತ್ಸವ ಕಾರ್ಯಕ್ರಮದ ಅಂಗವಾಗಿ ವಾಸ್ತು ರಾಕ್ಷೋಘ್ನ ಹೋಮ, ಬಲಿ ಉತ್ಸವ, ಕಟ್ಟೆ ಪೂಜೆ, ಧ್ವಜಾರೋಹಣ, ಪ್ರಧಾನ ಹೋಮ, ಮಹಾಪೂಜೆ ಅನ್ನಪ್ರಸಾದ ಸೇವೆ ಮಹಾ ರಂಗಪೂಜೆ. ಹಟ್ಟಿಯಂಗಡಿ ಮೇಳದವರಿಂದ ಯಕ್ಷಗಾನ ಕಾರ್ಯಕ್ರಮ ಜರುಗಿತು.
ಹಿರಿಯರಾದ ಗಣಪ್ಪಯ್ಯ ಶೆಟ್ಟಿ ಮಾತನಾಡಿ,11ನೇ ಶತಮಾನದಲ್ಲಿ ಸ್ಥಾಪನೆಯಾದ ಶ್ರೀಮಾಣಿಕೊಳಲು ಶ್ರೀಲಕ್ಷ್ಮೀಚೆನ್ನಕೇಶವ ದೇವಸ್ಥಾನವನ್ನು ಕಮಿಟಿ ಅವರ ಸಹಕಾರದಿಂದ ಹಂತ ಹಂತವಾಗಿ ಜೀರ್ಣೋದ್ಧಾರ ಮಾಡಲಾಗಿದೆ. ದೇವಸ್ಥಾನದ ಕೆರೆ ಅಭಿವೃದ್ಧಿ ಸಹಿತ ಬಹಳಷ್ಟು ಕಾರ್ಯಗಳು ಬಾಕಿ ಇದ್ದು, ದಾನಿಗಳು, ಗ್ರಾಮಸ್ಥರು, ಜನಪ್ರತಿನಿಧಿಗಳು ಸಹಕಾರವನ್ನು ನೀಡಬೇಕೆಂದು ಕೇಳಿಕೊಂಡರು.
ದೇವಸ್ಥಾನದ ಆಡಳಿತ ಸಮಿತಿ ಕಾರ್ಯದರ್ಶಿ ಸತೀಶ್ ಶೆಟ್ಟಿ ಯಳೂರು ಮಾತನಾಡಿ, 16 ಮಾಗಣೆಯನ್ನು ಹೊಂದಿರುವ ಮಾಣಿಕೊಳಲು ಶ್ರೀಚೆನ್ನಕೇಶವ ದೇವರ ಕಾರಣಿಕ ಶಕ್ತಿ ಅಪಾರವಾದದ್ದು. ಸಂಪ್ರದಾಯ ಬದ್ಧವಾಗಿ ಪ್ರತಿ ವರ್ಷ ಶ್ರೀದೇವರ ರಥೋತ್ಸವ ಕಾರ್ಯಕ್ರಮ ದಾನಿಗಳು, ಊರವರ ಸಹಕಾರದಿಂದ ನಡೆಯುತ್ತಿದೆ ಎಂದರು. ದೇವಸ್ಥಾನದಲ್ಲಿ ಅಭಿವೃದ್ಧಿ ಕೆಲಸಗಳು ಇನ್ನಷ್ಟು ಬಾಕಿ ಉಳಿದಿದ್ದು ಶ್ರೀಕ್ಷೇತ್ರದ ಅಭಿವೃದ್ಧಿ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ವಿನಂತಿಸಿಕೊಂಡರು.
ದೇವಸ್ಥಾನದ ಅಧ್ಯಕ್ಷರಾದ ಎಚ್.ಜಗದೀಶಯ್ಯ ಹಲ್ಸನಾಡು ಅವರು ಶುಭಕೋರಿದರು. ಈ ಸಂದರ್ಭದಲ್ಲಿ ಲಕ್ಷ್ಮೀನಾರಾಯಣ ಹೆಬ್ಬಾರ್, ನಿವೃತ್ತ ಶಿಕ್ಷಕ ಸಂಜೀವ ಬಿಲ್ಲವ, ವಿಶ್ವನಾಥ ಗಾಣಿಗ, ಕೃಷ್ಣ ಪೂಜಾರಿ, ಚಂದ್ರಹಾಸ ಹೊಳ್ಮಗೆ, ಸುಧಾಕರ ಕೊಳೂರು, ಹೇಮಾವತಿ ಆಚಾರ್ಯ, ಶುಭಮತಿ ದೇವಾಡಿಗ ಮಾಣಿಕೊಳಲು, ಅರ್ಚಕರಾದ ಗುರುರಾಜ ಉಡುಪ, ಚಂದ್ರಶೇಖರ ಉಪಾಧ್ಯ, ಗ್ರಾಮಸ್ಥರು ಉಪಸ್ಥಿತರಿದ್ದರು.