ಮಂಗಳೂರು: ಕೃಷಿ ಆಧಾರಿತ ತೌಳವ ಸಂಸ್ಕೃತಿ ಜಾತ್ಯತೀತ ಮತ್ತು ಧರ್ಮಾತೀತ. ಆದ್ದರಿಂದ ತುಳು ಭಾಷೆ ಮತ್ತು ಸಂಸ್ಕೃತಿಯಲ್ಲಿ ಭೇದವನ್ನು ಹುಡುಕುವುದು ಸರಿಯಲ್ಲ ಎಂದು ಸಂಸದ ನಳಿನ್‌ಕುಮಾರ್ ಕಟೀಲ್ ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯ ಸಂಧ್ಯಾ ಕಾಲೇಜಿನ ತುಳು ಅಧ್ಯಯನ ವಿಭಾಗ ಏರ್ಪಡಿಸಿದ್ದ ಶ್ರೀ ಸಂಸ್ಥಾನ ಒಡಿಯೂರು ತುಳು ಅಧ್ಯಯನ ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ತುಳುವಿನಲ್ಲಿ ಮತೀಯವಾದ ಇಲ್ಲ. ಆಚರಣೆ, ನಂಬಿಕೆ ಮತ್ತು ಭಾಷೆಯ ಬಳಕೆ ಆಧಾರಿತ ಮತಧರ್ಮ ಮಾತ್ರ ಅಲ್ಲಿರುವುದು. ಆದರೆ ಇದರ ಬಗ್ಗೆ ಅಪಪ್ರಚಾರ ನಡೆಯುತ್ತಿರುವುದರಿಂದ ಈ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಸವಾಲು ಇದೆ. ವಿಶಿಷ್ಟ ಸಂಸ್ಕೃತಿಯಲ್ಲಿ ಬೆಳೆದಿರುವ ತುಳು ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸುವ ಕಾರ್ಯ ನಡೆಯಬೇಕು. ಸರ್ಕಾರ ಮಾಡಬೇಕಾಗಿರುವ ಕೆಲಸವನ್ನು ಒಡಿಯೂರು ಮಠ ಮತ್ತು ಧರ್ಮಸ್ಥಳದ ದೇವಾಲಯ ಮಾಡುತ್ತಿರುವುದು ಶ್ಲಾಘನೀಯ ಎಂದು ಅವರು ನುಡಿದರು.

ತುಳು ಮಾತನಾಡುವವ ಸಂಖ್ಯೆ ಕಡಿಮೆಯಾಗುತ್ತಿದೆ. ಮನೆಗಳಲ್ಲಿ ಇಂಗ್ಲಿಷ್ ರಾರಾಜಿಸುತ್ತಿದೆ. ಗದ್ದೆಗಳಲ್ಲಿ ಪಾಡ್ಡನಗಳ ಬದಲು ಟಿಲ್ಲರ್ ಶಬ್ದ ಕೇಳಿಸುತ್ತಿದೆ. ನಾಗಾರಾಧನೆಯೊಂದು ಬಿಟ್ಟರೆ ಉಳಿದೆಲ್ಲ ಆಚರಣೆಗಳು ಕಡಿಮೆಯಾಗುತ್ತಿವೆ. ಪಾಡ್ಡನ ಮತ್ತು ದೈವಾರಾಧನೆಯ ಕಲಾವಿದರಲ್ಲಿ ಮಾತ್ರ ಭಾಷೆ ಮತ್ತು ಸಂಸ್ಕೃತಿ ಉಳಿದುಕೊಂಡಿದೆ ಎಂದರು.

‘ಮಂದಾರ’ ಮತ್ತು ‘ಬಂಗಾರ್ದ ಕುರಲ್’ ಪುಸ್ತಕಗಳನ್ನು ಬಿಡುಗಡೆ ಮಾಡಿದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ ಪ್ರತಿ ಮನೆಯೂ ತುಳು ಅಧ್ಯಯನ ಕೇಂದ್ರ ಆದರೆ ಮಾತ್ರ ಭಾಷೆ ಮತ್ತು ಸಂಸ್ಕೃತಿ ಉಳಿಯಬಹುದು. ತುಳು ವ್ಯಾವಹಾರಿಕ ಭಾಷೆಯಾಗಿದ್ದು ಅದಕ್ಕೆ ಮತ-ಧರ್ಮದ ಭೇದ ಇಲ್ಲ. ಭಾಷೆಯ ಜೊತೆ ಬೇರೆ ಏನೇನನ್ನೋ ಜೋಡಿಸಬೇಡಿ ಎಂದು ಹೇಳಿದರು.ಮಕ್ಕಳ ಜೊತೆ ತುಳುವಿನಲ್ಲೇ ಮಾತನಾಡಿ. ಭಾಷೆ ಉಳಿಯುವುದಿಲ್ಲ ಎಂಬ ಆತಂಕ ಬೇಡ. ನಂಬಿಕೆ ಇರಲಿ. ಅದರಿಂದ ಪೂರಕ ವಾತಾವರಣ ಸೃಷ್ಟಿಯಾಗುತ್ತದೆ ಎಂದು ಅವರು ಹೇಳಿದರು.

ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ತಿಳಿದಿಲ್ಲದ ವಿಚಾರವಾದಿಗಳು ಎಲ್ಲವನ್ನೂ ವಿರೋಧಿಸುತ್ತಿದ್ದಾರೆ. ವಿರೋಧಿಸುವುದನ್ನೇ ಉದ್ಯೋಗ ಮಾಡಿಕೊಂಡಿರುವ ಅವರು ಈಚೆಗೆ ವಿಚಿತ್ರವಾದಿಗಳಾಗಿದ್ದಾರೆ ಎಂದು ನಳಿನ್‌ಕುಮಾರ್ ಕಟೀಲ್ ದೂರಿದರು.

ತುಳು ಅಧ್ಯಯನ ವಿಭಾಗದಲ್ಲಿ ಹಬ್ಬಗಳನ್ನು ಆಚರಿಸಿದರೆ ಟೀಕೆಗಳು ಕೇಳಿಬರುತ್ತಿದ್ದು ಜಿಲ್ಲಾಧಿಕಾರಿವರೆಗೂ ದೂರುಗಳು ಹೋಗುತ್ತಿವೆ. ಇದನ್ನು ನಿಲ್ಲಿಸಲು ಮುಂದಾಗಬೇಕು ಎಂದು ಕೋರಿದ ತುಳು ಸ್ನಾತಕೋತ್ತರ ಅಧ್ಯಯನ ಪೀಠದ ಸಂಯೋಜಕ ಡಾ.ಮಾಧವ ಎಂ.ಕೆ ಅವರ ಮನವಿಗೆ ಸ್ಪಂದಿಸಿದ ಸಂಸದರು ಕಾರ್ಯಕ್ರಮಗಳನ್ನು ಯಾವ ಅಂಜಿಕೆಯೂ ಇಲ್ಲದೆ ಮಾಡಿ. ಎಲ್ಲದಕ್ಕೆ ಬೆಂಬಲವಾಗಿ ನಾನಿದ್ದೇನೆ. ಈ ಬಗ್ಗೆ ಜಿಲ್ಲಾಧಿಕಾರಿಗೂ ಸೂಚನೆ ನೀಡುವೆ ಎಂದು ಭರವಸೆ ನೀಡಿದರು.

ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅಧ್ಯಕ್ಷತೆ ವಹಿಸಿದ್ದರು. ಧರ್ಮದರ್ಶಿ ಹರಿಕೃಷ್ಣ ಪುನರೂರು, ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ, ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ರವೀಂದ್ರನಾಥ ರೈ, ತುಳು ಪೀಠದ ಸಲಹಾ ಸಮಿತಿ ಸದಸ್ಯೆ ರಾಜಶ್ರೀ ಎಸ್.ಹೆಗ್ಡೆ ಕಾಣಿಯೂರುಗುತ್ತು, ಮಂಗಳೂರು ವಿವಿ ಕಾಲೇಜು ಪ್ರಾಂಶುಪಾಲರಾದ ಅನಸೂಯಾ ರೈ, ಸಂಧ್ಯಾ ಕಾಲೇಜು ಪ್ರಾಂಶುಪಾಲೆ ಸುಭಾಷಿಣಿ ಶ್ರೀವತ್ಸ, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಕದ್ರಿ ನವನೀತ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.