ಬಂಟ್ವಾಳ: ವಿದ್ಯಾರ್ಥಿ ಜೀವನದಲ್ಲೇ ಪರಿಶ್ರಮ ಪಟ್ಟಲ್ಲಿ ಸಾಧಿಸುವುದು ಕಷ್ಟವಲ್ಲ. ಪ್ರತಿಯೊಬ್ಬರೂ ಕ್ರೀಡೆಯನ್ನು ಜೀವನದ ಒಂದು ಭಾಗವಾಗಿ ಅಳವಡಿಸಿಕೊಂಡಲ್ಲಿ ಸಣ್ಣಪುಟ್ಟ ಸೋಲುಗಳಿಗೆ ಹತಾಶರಾಗುವ ಮನೋಭಾವ ತಪ್ಪುತ್ತದೆ. ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕ್ರೀಡೆಗೂ ಮಹತ್ವ ನೀಡಿದಲ್ಲಿ ಅವರ ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯ ಹೆಚ್ಚುತ್ತದೆ ಎಂದು ೨೦೨೪ರ ಕಾಮನ್‌ವೆಲ್ತ್ ಕ್ರೀಡಾಕೂಟದ ಸ್ವರ್ಣಪದಕ ವಿಜೇತ ಕ್ರೀಡಾಪಟು ಶ್ರೀ ಪ್ರದೀಪ್ ಕುಮಾರ್ ಕರೆನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಇವರು ಬಂಟ್ವಾಳ ವಿದ್ಯಾಗಿರಿಯ ಶ್ರೀ ವೆಂಕಟರಮಣಸ್ವಾಮಿ ಸಮೂಹ ಶಿಕ್ಷಣ ಸಂಸ್ಥೆಗಳ ೨೦೨೪-೨೫ನೇ ಸಾಲಿನ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಶ್ರೀಮತಿ ಕೆ.ರೇಖಾ ಶೆಣೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಕ್ರೀಡೆ ಅತ್ಯಂತ ಸಹಕಾರಿ. ವಿದ್ಯಾರ್ಥಿಗಳು ಯಾವುದಾದರೊಂದು ಕ್ರೀಡೆಯಲ್ಲಿ ಭಾಗವಹಿಸುವುದು ಉತ್ತಮ ಹಾಗೂ ಸದೃಢ ಜೀವನ ಶೈಲಿಗೆ ಅತ್ಯಂತ ಉಪಯೋಗವಾಗುತ್ತದೆ ಎಂದು ಶ್ರೀ ವೆಂಕಟರಮಣಸ್ವಾಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾತ್ಮಕ ಪ್ರಾಂಶುಪಾಲರಾದ ಡಾ.ಸುಯೋಗವರ್ಧನ್.ಡಿ.ಎಮ್. ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಎಸ್.ವಿ.ಎಸ್.ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸುದರ್ಶನ್ ಬಿ ಅತಿಥಿಗಳನ್ನು ಪರಿಚಯಿಸಿದರು. ವೇದಿಕೆಯಲ್ಲಿ ಬಿ.ಆರ್.ಎಂ.ಪಿ.ಸಿ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಜೂಲಿ ಟಿ.ಜೆ. ಉಪಸ್ಥಿತರಿದ್ದರು.
ಎಸ್.ವಿ.ಎಸ್. ಇಂಗ್ಲೀಷ್ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಹರಿಪ್ರಸಾದ್ ಸ್ವಾಗತಿಸಿ, ಸಮೂಹಸಂಸ್ಥೆಗಳ ಕ್ರೀಡಾಮೇಲ್ವಿಚಾರಕರಾದ ಶ್ರೀ ಮಹೇಶ್ ಶೆಟ್ಟಿ ವಂದಿಸಿದರು. ಎಸ್.ವಿ.ಎಸ್. ಇಂಗ್ಲೀಷ್ ಶಾಲೆಯ ಲಿಖಿತ ಮತ್ತು ತಂಡದವರು ಪ್ರಾರ್ಥಿಸಿದರು. ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಕ್ರೀಡೆಗಳಲ್ಲಿ ಶಾಲೆಯನ್ನು ಪ್ರತಿನಿಧಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.