ಕುಂದಾಪುರ: ತಾಲೂಕಿನ ತ್ರಾಸಿ ಗ್ರಾಮದ ಮೊವಾಡಿ ಶ್ರೀಮಾಣಿಸಿದ್ಧಲಿಂಗೇಶ್ವರ ದೇವಸ್ಥಾನದ ಸುವರ್ಣ ಮಹೋತ್ಸವ, ಮಹಾಶಿವರಾತ್ರಿ ಉತ್ಸವ, ರಾಜ್ಯ ಮಟ್ಟದ ಕುಣಿತ ಭಜನಾ ಸ್ಪರ್ಧೆ ಕಾರ್ಯಕ್ರಮ, ಅನ್ನಸಂತರ್ಪಣೆ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಗುರುವಾರ ಅದ್ದೂರಿಯಾಗಿ ನಡೆಯಿತು. ಭಾರಂಗಿ ಕೂಡ್ಲಿಮಠ ಮಹಾ ಸಂಸ್ಥಾನ ತಾಳಗುಪ್ಪ ಸಾಗರ ಪರಮ ಪೂಜ್ಯ ಶ್ರೀ ಸಿದ್ಧವೀರ ಮಹಾಸ್ವಾಮೀಜಿ ಅವರನ್ನು ಭವ್ಯ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು.
ಪರಮ ಪೂಜ್ಯ ಶ್ರೀ ಸಿದ್ಧವೀರ ಮಹಾಸ್ವಾಮೀಜಿ ಅವರು ರಾಜ್ಯ ಮಟ್ಟದ ಕುಣಿತ ಭಜನಾ ಸ್ಪರ್ಧೆಯನ್ನು ಉದ್ಘಾಟಿಸಿ, ಆಶೀರ್ವಚನ ನೀಡಿ ಮಾತನಾಡಿದವರು, ದುಡಿಮೆಯಿಂದ ಬೇಕಾದಷ್ಟು ಹಣವನ್ನು ಸಂಪಾದಿಸಬಹುದು ಆದರೆ ಜೀವನದಲ್ಲಿ ನೆಮ್ಮದಿಯನ್ನು ಸಂಪಾದನೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಭಕ್ತಿ ಮಾರ್ಗದಲ್ಲಿ ಸಾಗಿದರೆ ಜೀವನದಲ್ಲಿ ನೆಮ್ಮದಿ ಬದುಕನ್ನು ಕಾಣುವುದರ ಜತೆಗೆ ಸುಸಂಸ್ಕೃತರಾಗಿ ಬದುಕಲು ಸಾಧ್ಯವಿದೆ ಎಂದು ಹೇಳಿದರು.
ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ,ಭಜನಾ ತಂಡವನ್ನು ಕಟ್ಟಿಕೊಂಡು ಕಳೆದ ಐವತ್ತು ವರ್ಷಗಳಿಂದ ಭಜನಾ ಕೈಂಕರ್ಯದಲ್ಲಿ ತೊಡಗಿಕೊಂಡಿರುವ ಮೊವಾಡಿ ಶ್ರೀಮಾಣಿಸಿದ್ಧಲಿಂಗೇಶ್ವರ ಭಜನಾ ತಂಡವು ಧಾರ್ಮಿಕ ಕ್ಷೇತ್ರಕ್ಕೆ ತನ್ನದೆ ರೀತಿಯಲ್ಲಿ ದೊಡ್ಡ ಕೊಡುಗೆಯನ್ನು ನೀಡಿದೆ ಎಂದು ಶ್ಲಾಘೀಸಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀಮಾಣಿಸಿದ್ಧಲಿಂಗೇಶ್ವರ ದೇವಸ್ಥಾನ ಮೊವಾಡಿ ಗೌರವಾಧ್ಯಕ್ಷ ಅನಂತ ಮೊವಾಡಿ ಮಾತನಾಡಿ, ಭಜನೆಗಿರುವ ಮಹತ್ವ ಮತ್ತು ಹಿಂದಿನ ಪರಂಪರೆಯನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ದೃಷ್ಟಿಯಿಂದ ಶಿವರಾತ್ರಿ ಜಾಗರಣೆ ಅಂಗವಾಗಿ ಭಜನಾ ಮಹೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಪ್ರತಿ ಮನೆಯಲ್ಲಿಯೂ ಭಜನೆ ಸಪ್ಪಳ ಮರುಕಳಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ತ್ರಾಸಿ ಪಂಚಾಯಿತಿ ಅಧ್ಯಕ್ಷ ಮಿಥುನ್ ದೇವಾಡಿಗ ಮತ್ತು ಉಪಾಧ್ಯಕ್ಷೆ ಹೇಮ,ಉದ್ಯಮಿ ಶಿವ ಆರ್ ಪೂಜಾರಿ ಆನಗೋಡು, ಕೆನರಾ ಬ್ಯಾಂಕ್ ನಿವೃತ್ತ ಹಿರಿಯ ವ್ಯವಸ್ಥಾಪಕ ಚಂದ್ರಶೇಖರ್, ಶ್ರೀಮಾಣಿ ಸಿದ್ಧಲಿಂಗೇಶ್ವರ ದೇವಸ್ಥಾನ ಮೊವಾಡಿ ಮೊಕ್ತೇಸರರಾದ ಸುಧಾಕರ ಮೊವಾಡಿ ಮತ್ತು ವಿಜಯ ಹಾಗೂ ಬಿ.ಕೆ ನಾರಾಯಣ, ಗೌರವ ಕಾರ್ಯದರ್ಶಿ ವೆಂಕಟ ಪೂಜಾರಿ, ಶೇಖರ್ ಗಾಣಿಗ, ರವಿರಾಜ್ ಶೆಟ್ಟಿ ಆನಗೋಡು, ಪಂಚಾಯಿತಿ ಸದಸ್ಯ ವಿಜಯ ಚುಟ್ಟಿತ್ತಾರು, ಜಿ.ಟಿ ಮಂಜುನಾಥ ಗಂಗೊಳ್ಳಿ, ರವಿಜ ಪೂಜಾರಿ ಕಳಿನಮನೆ, ದೇವಸ್ಥಾನದ ಅಧ್ಯಕ್ಷ ಗಣೇಶ, ಟಿ.ವಿ ಸುಬ್ಬಣ್ಣ, ತೀರ್ಪುಗಾರರು ಉಪಸ್ಥಿತರಿದ್ದರು.
ಅನಾರೋಗ್ಯ ಪೀಡಿತರಿಗೆ ಧನಸಹಾಯ ವಿತರಿಸಲಾಯಿತು. ದಾನಿಗಳನ್ನು, ಹಿರಿಯರನ್ನು ಗೌರವಿಸಲಾಯಿತು. ಸುಧಾಕರ ಮೊವಾಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣೇಶ ನಿರೂಪಿಸಿದರು, ಸಂತೋಷ ಎಂ.ಆರ್ ವಂದಿಸಿದರು, ನಾನಾ ಭಜನಾ ತಂಡಗಳಿಂದ ಕುಣಿತ ಭಜನಾ ಸ್ಪರ್ಧೆ ಜರುಗಿತು.