ಮೈಸೂರು: ಅನಾರೋಗ್ಯದಿಂದ ನಿಧನರಾಗಿರುವ ಚಾಮರಾಜನಗರ ಬಿಜೆಪಿ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಅವರ ಅಂತ್ಯಕ್ರಿಯೆ ಅಶೋಕಪುರಂನ ಡಾ. ಬಿ.ಆರ್. ಅಂಬೇಡ್ಕರ್ ಟ್ರಸ್ಟ್ ಆವರಣದಲ್ಲಿ ಬೌದ್ಧ ವಿಧಿವಿಧಾನದಂತೆ ನಡೆಯಿತು.
ಬೆಂಗಳೂರಿನ ಮಹಾಬೋಧಿ ಸೊಸೈಟಿಯ ಆನಂದ ಬಂತೇಜಿ ಮತ್ತು ಮೈಸೂರಿನ ವಿಶ್ವಮೈತ್ರಿ ಬುದ್ಧ ವಿಹಾರದ ಕಲ್ಯಾಣಸಿರಿ ಬಂತೇಜಿ ನೇತೃತ್ವದಲ್ಲಿ ಅಂತ್ಯ ಸಂಸ್ಕಾರ ವಿಧಿವಿಧಾನಗಳು ನಡೆದವು. 15ಕ್ಕೂ ಹೆಚ್ಚು ಬೌದ್ಧ ಭಿಕ್ಕುಗಳು ಪುಣ್ಯಾನುಮೋದನೆ ಪ್ರಾರ್ಥನೆ ಸಲ್ಲಿಸಿದರು. ಬೌದ್ಧ ಬಿಕ್ಕುಗಳಿಗೆ ವಸ್ತ್ರದಾನ, ಹಣ್ಣುಗಳ ಅರ್ಪಣೆ ಬಳಿಕ ಕುಟುಂಬಸ್ಥರು ಅಂತಿಮ ನಮನ ಸಲ್ಲಿಸಿದ ಬಳಿಕ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಅಂತ್ಯಕ್ರಿಯೆಗೂ ಮುನ್ನಾ ಮೈಸೂರಿನ ಅಶೋಕಪುರಂನ ಪ್ರಮುಖ ರಸ್ತೆಗಳಲ್ಲಿ ಮೃತರ ಪಾರ್ಥೀವ ಶರೀರದ ಮೆರವಣಿಗೆ ನಡೆಯಿತು. ಸಾವಿರಾರು ಜನರು ನೆರೆದಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದರು. ಸಚಿವ ಎಚ್.ಸಿ. ಮಹಾದೇವಪ್ಪ, ಡಾ. ಸಿ.ಎನ್. ಮಂಜುನಾಥ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಯದುವೀರ್ ಒಡೆಯರ್, ಪ್ರತಾಪ್ ಸಿಂಹ ಸೇರಿದಂತೆ ಹಲವಾರು ಗಣ್ಯರು ಅಂತಿಮ ದರ್ಶನ ಪಡೆದರು.
ಅಶೋಕಪುರಂನ ಶ್ರೀನಿವಾಸ್ ಪ್ರಸಾದ್ ಚಾಮರಾಜನಗರ ಮೀಸಲು ಕ್ಷೇತ್ರದಿಂದ ಆರು ಬಾರಿ ಸಂಸದರಾಗಿದ್ದರು. ನಂಜನಗೂಡು ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ದರು. ನಿಷ್ಕಳಂಕಿತ ವ್ಯಕ್ತಿಯಾಗಿದ್ದ ಅವರು ಮೈಸೂರು ಭಾಗದಲ್ಲಿ ಪ್ರಭಾವಿ ನಾಯಕರಾಗಿದ್ದರು. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೊಂದು ಬಾರಿ ಸಚಿವರಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಕಳೆದ ತಿಂಗಳಷ್ಟೇ ರಾಜಕೀಯ ನಿವೃತ್ತಿ ಘೋಷಿಸಿದ್ದರಿಂದ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಸ್ಪರ್ಧಿಸಲು ಟಿಕೆಟ್ ಕೈತಪ್ಪಿತ್ತು. ಶ್ರೀನಿವಾಸ್ ಪ್ರಸಾದ್ ಅವರು ಪತ್ನಿ, ಮೂವರು ಹೆಣ್ಣು ಮಕ್ಕಳು ಮತ್ತು ರಾಜ್ಯಾದ್ಯಂತ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.