ಸುಳ್ಯ: ಕಾಂಗ್ರೆಸ್ ಪಕ್ಷ ಹಾಗೂ ಕಾಂಗ್ರೆಸ್ ಮತದಾರರ ಬಗ್ಗೆ ಅವಹೇಳನಕಾರಿ ಸ್ಟೇಟಸ್ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಠಾಣೆಯಲ್ಲಿ ನಡೆದ ಮಾತುಕತೆಯ ಪ್ರಕಾರ ಮುಚ್ಚಲ್ಪಟ್ಟಿದ್ದ ಅಂಗಡಿಯನ್ನು ಬಿಜೆಪಿಗರು ತೆರೆಸಿದ ಬಗ್ಗೆ ವರದಿಯಾಗಿದೆ. ಪಂಜದಲ್ಲಿ ಅಂಗಡಿ ಹೊಂದಿರುವ ವ್ಯಕ್ತಿಯೊಬ್ಬರು ಕಾಂಗ್ರೆಸ್ ಪಕ್ಷ ಹಾಗೂ ಮತದಾರರ ಬಗ್ಗೆ ಅವಹೇಳನಕಾರಿ ಸ್ಟೇಟಸ್ ಹಾಕಿದ್ದರು. ಈ ವಿಷಯ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಸುಬ್ರಹ್ಮಣ್ಯ ಠಾಣೆಗೆ ಆರೋಪಿಯನ್ನು ಕರೆಸಿ ವಿಚಾರಣೆ ನಡೆದಿತ್ತು.
ಈ ವೇಳೆ ಆರೋಪಿಯು ತಪ್ಪೊಪ್ಪಿಕೊಂಡು, ಕ್ಷಮೆಯಾಚಿಸಿದ್ದರು. ಅಲ್ಲದೆ ಪ್ರಕರಣ ಹಿಂಪಡೆಯುವಂತೆ ವಿನಂತಿಸಿದ್ದರು. ಈ ವೇಳೆ ಆರೋಪಿಯು ತನ್ನ ಅಂಗಡಿಯನ್ನು ಮೂರು ದಿನಗಳ ಕಾಲ ಬಂದ್ ಮಾಡಬೇಕೆಂದು ಷರತ್ತು ವಿಧಿಸಿದ್ದರು. ಆ ಪ್ರಕಾರ ಪ್ರಕರಣ ಹಿಂಪಡೆಯಲಾಗಿತ್ತು. ಅದರಂತೆ ಮರುದಿನ ಅವರು ಅಂಗಡಿ ಬಂದ್ ಮಾಡಿದ್ದರು. ಆದರೆ ವಿಷಯ ತಿಳಿದು ಇಲ್ಲಿಗೆ ಆಗಮಿಸಿದ ಬಿಜೆಪಿ ನಾಯಕರು ಅಂಗಡಿ ತೆರೆಯುವಂತೆ ಆರೋಪಿಗೆ ಧೈರ್ಯ ತುಂಬಿದರು.
ಸ್ಟೇಟಸ್ ಹಾಕಿರುವುದಕ್ಕೆ ತಪ್ಪೊಪ್ಪಿಕೊಂಡಿದ್ದು, ಅಂಗಡಿ ಬಂದ್ ಮಾಡುತ್ತೇನೆ ಎಂದು ಮುಚ್ಚಳಿಕೆ ಬರೆದುಕೊಟ್ಟಿರಲಿಲ್ಲ. ಕಾಂಗ್ರೆಸ್‌ನವರು ಹೇಳುತ್ತಾರೆಂದು ಅಂಗಡಿ ಮುಚ್ಚಲು ಸಾಧ್ಯವಿಲ್ಲ. ನಾವು ತಿಳಿಸಿದಂತೆ ಈಗ ಅಂಗಡಿ ತೆರೆಯಲಾಗಿದೆ ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ.