ಲಕ್ನೋ: 6 ಜನರನ್ನು ಮದುವೆಯಾಗಿ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಮಹಿಳೆಯನ್ನು 7ನೇ ಮದುವೆ ತಯಾರಿಯಲ್ಲಿದ್ದಾಗ ಉತ್ತರ ಪ್ರದೇಶದ ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ.
ಬಂಧಿತ ಮಹಿಳೆಯನ್ನು ಪೂನಂ ಎಂದು ಗುರುತಿಸಲಾಗಿದೆ. ಆಕೆಯ ತಾಯಿಯಂತೆ ಸಂಜನಾ ಗುಪ್ತಾ ಎಂಬಾಕೆ ನಟಿಸುತ್ತಿದ್ದಳು. ಈ ಇಬ್ಬರಿಗೂ ವಿಮಲೇಶ್ ವರ್ಮಾ ಮತ್ತು ಧರ್ಮೇಂದ್ರ ಪ್ರಜಾಪತಿ ಎಂಬವರು ಯುವಕರನ್ನು ಪರಿಚಯಿಸುತ್ತಿದ್ದರು. ಬಳಿಕ ಗ್ಯಾಂಗ್ ಯುವಕರಿಂದ ಹಣ ವಸೂಲಿ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪರಿಚಯಿಸಿದ ಯುವಕರ ಜೊತೆ ಸರಳ ವಿವಾಹವಾಗಿ ಪೂನಂ ಪತಿಯ ಮನೆಗೆ ತೆರಳುತ್ತಿದ್ದಳು. ಬಳಿಕ ಸಮಯ ಸಿಕ್ಕಾಗ ಹಣ ಹಾಗೂ ಚಿನ್ನ ದೋಚಿ ಆಕೆ ಪರಾರಿಯಾಗುತ್ತಿದ್ದಳು. ಇದೇ ರೀತಿ 6 ಜನರಿಗೆ ಈ ಗ್ಯಾಂಗ್ ವಂಚಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಶಂಕರ್ ಉಪಾಧ್ಯಾಯ ಎಂಬವರಿಗೆ ಪೂನಂಳನ್ನು ತೋರಿಸಿ ಮದುವೆ ವಿಚಾರವಾಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಶಂಕರ್‌ಗೆ ಅನುಮಾನ ಬಂದು ಪೂನಂ ಹಾಗೂ ಸಂಜನಾಳ ಆಧಾರ್ ಕಾರ್ಡ್ ಕೇಳಿದ್ದಾರೆ. ಈ ವೇಳೆ ಅವರ ಸಂಚು ಬಯಲಾಗಿದೆ. ಈ ವೇಳೆ ಆರೋಪಿಗಳು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಶಂಕರ್ ದೂರಿದ್ದಾರೆ. ಈ ಘಟನೆ ಸಂಬಂಧ ಅವರು ದಾಖಲಿಸಿದ ದೂರಿನ ಮೇಲೆ ಮೂವರನ್ನು ಬಂಧಿಸಲಾಗಿದೆ.
6 ಜನರನ್ನು ವಿವಾಹವಾಗಿ ಹಣ, ಚಿನ್ನ ಕಳವು: 7ನೇ ಮದುವೆಗೆ ರೆಡಿಯಾಗಿದ್ದಾಗ ಮಹಿಳೆಯ ಸೆರೆ
RELATED ARTICLES