ಟಿಬೆಟ್: ಟಿಬೆಟ್ ಪ್ರದೇಶದಲ್ಲಿ ಜ. 7 (ಇಂದು) ಬೆಳಗ್ಗೆ ಪ್ರಬಲ ಭೂಕಂಪ ಸಂಭವಿಸಿದ್ದು, ಮೃತಪಟ್ಟವರ ಸಂಖ್ಯೆ 95ಕ್ಕೆ ಏರಿಕೆಯಾಗಿದ್ದು, 130 ಜನರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.
ರಿಕ್ಟರ್ ಮಾಪಕದಲ್ಲಿ 6.8ರ ತೀವ್ರತೆ ದಾಖಲಾಗಿದ್ದು, 10 ಕಿ.ಮೀ. ಆಳದಲ್ಲಿ ಸ್ಥಳೀಯ ಕಾಲಮಾನ ಬೆಳಗ್ಗೆ 9:05 ಗಂಟೆಗೆ ಭೂಕಂಪ ಸಂಭವಿಸಿದೆ. ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ಪ್ರಕಾರ ಭೂಕಂಪದ ತೀವ್ರತೆ 7.1 ಆಗಿದೆ. ಇಂದು ಮಧ್ಯಾಹ್ನ ವೇಳೆಗೆ ಮೃತಪಟ್ಟವರ ಸಂಖ್ಯೆ 95ಕ್ಕೆ ಏರಿಕೆಯಾಗಿದ್ದು, 130 ಜನರು ಗಾಯಗೊಂಡಿದ್ದಾರೆ ಎಂದು ಚೀನಾ ರಾಜ್ಯ ಮಾಧ್ಯಮ ವರದಿ ಮಾಡಿದೆ.
ಭೂಕಂಪದ ಪ್ರಭಾವವಾಗಿ, ನೆರೆಯ ನೇಪಾಳದ ರಾಜಧಾನಿ ಕಠ್ಮಂಡು ಮತ್ತು ಭಾರತದ ಉತ್ತರ ಭಾಗಗಳಲ್ಲಿ, ವಿಶೇಷವಾಗಿ ಬಿಹಾರದಲ್ಲಿ ಕಂಪನಗಳು ಕಂಡುಬಂದಿದ್ದು, ಅಲ್ಲಿ ಜನರು ತಮ್ಮ ಮನೆಗಳು ಮತ್ತು ಅಪಾರ್ಟ್‌ಮೆಂಟ್‌ಗಳಿಂದ ಹೊರ ಬಂದಿದ್ದಾರೆ. ಆದರೆ, ಆಸ್ತಿಪಾಸ್ತಿಗೆ ಹಾನಿಯಾದ ಬಗ್ಗೆ ವರದಿಯಾಗಿಲ್ಲ.
ಬಿಹಾರ ವಿಪತ್ತು ನಿರ್ವಹಣಾ ಇಲಾಖೆಯ ಪ್ರಕಾರ, ಭಾರತ-ನೇಪಾಳ ಗಡಿಯಲ್ಲಿರುವ ಪಾಟ್ನಾ, ಮಧುಬನಿ, ಶೆಯೋಹರ್, ಮುಂಗೇರ್, ಸಮಸ್ತಿಪುರ್, ಮುಜಾಫರ್‌ಪುರ್, ಕತಿಹಾರ್, ದರ್ಬಂಗಾ, ಪಶ್ಚಿಮ ಚಂಪಾರಣ್, ಪೂರ್ವ ಚಂಪಾರಣ್ ಮತ್ತು ಹಲವಾರು ಜಿಲ್ಲೆಗಳಲ್ಲಿ ಕಂಪನದ ಅನುಭವವಾಗಿದೆ. ಭೂಕಂಪ ಸಂಭವಿಸಿದಾಗ ಕತಿಹಾರ್, ಪೂರ್ಣೆಯಾ, ಶಿಯೋಹರ್, ದರ್ಬಂಗಾ ಮತ್ತು ಸಮಸ್ತಿಪುರದಲ್ಲಿ ಜನರು ಮನೆಗಳಿಂದ ಹೊರ ಬಂದಿದ್ದಾರೆ.