ಬೆಂಗಳೂರು : ಮಾದಕ ವಸ್ತು ಮಾರಾಟ ನೆಪದಲ್ಲಿ ವಿದ್ಯಾರ್ಥಿ ಕರೆತಂದು ಹಣ ಸುಲಿಗೆಗೆ ಯತ್ನಿಸಿದ ಆರೋಪದ ಮೇಲೆ ಹೆಡ್ ಕಾನ್ಸ್ಟೇಬಲ್ ಹಾಗೂ ಇಬ್ಬರು ಪೊಲೀಸ್ ಮಾಹಿತಿದಾರರನ್ನು ಬಂಧಿಸಲಾಗಿದ್ದು, ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ. ಮಹಾಲಕ್ಷ್ಮಿ ಲೇಔಟ್ ಠಾಣೆ ಹೆಡ್ ಕಾನ್ಸ್ಟೇಬಲ್ ಪುನಿತ್ ಮತ್ತು ಪೊಲೀಸ್ ಮಾಹಿತಿದಾರ ಅರ್ಜುನ್, ಶಿವಸಾಗರ್ ಬಂಧಿತರು.
ಕೆಲವು ದಿನಗಳ ಹಿಂದೆ ಸಂಜಯನಗರ ಸಮೀಪ ನೆಲೆಸಿರುವ ಖಾಸಗಿ ಕಾಲೇಜಿನ ವಿದ್ಯಾರ್ಥಿಯನ್ನು ಡ್ರಗ್ಸ್ ಪ್ರಕರಣದ ತನಿಖೆ ನೆಪದಲ್ಲಿ ಆರೋಪಿಗಳು ಸುಲಿಗೆಗೆ ಯತ್ನಿಸಿದ್ದರು.
ಮಹಾಲಕ್ಷ್ಮಿ ಲೇಔಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪುನೀತ್ ಅವರಿಗೆ ಅರ್ಜುನ್ ಮತ್ತು ಶಿವಸಾಗರ್ ಮಾಹಿತಿದಾರರಾಗಿದ್ದರು. ಕೆಲವು ದಿನಗಳ ಹಿಂದೆ ಸಂಜಯನಗರ ನಿವಾಸಿ ಬಗ್ಗೆ ಪುನಿತ್ ಗೆ ಇಬ್ಬರು ಮಾಹಿತಿ ನೀಡಿದ್ದು ಶಂಕೆ ಮೇರೆಗೆ ವಿಚಾರಣೆ ನೆಪದಲ್ಲಿ ಸಂತ್ರಸ್ತನನ್ನು ವಶಕ್ಕೆ ಪಡೆದಿದ್ದರು.
ಮಹಾಲಕ್ಷ್ಮಿ ಲೇಔಟ್ ಠಾಣೆಯ ಹಿಂಭಾಗದ ಕೋಣೆಯಲ್ಲಿ ಅಕ್ರಮ ಬಂಧನದಲ್ಲಿಟ್ಟು ಆತನಿಗೆ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ನಂತರ ಆರೋಪಿಗಳು ಬಿಟ್ಟು ಕಳುಹಿಸಿದ್ದರು.
ಸಂತ್ರಸ್ತ ವಿದ್ಯಾರ್ಥಿ ವಕೀಲರೊಂದಿಗೆ ಉತ್ತರ ವಿಭಾಗದ ಡಿಸಿಪಿ ಬಿ.ಎಸ್. ನೇಮಗೌಡ ಅವರಿಗೆ ದೂರು ನೀಡಿದ್ದು, ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ ಡಿಸಿಪಿ ತನಿಖೆಗೆ ಸಂಜಯನಗರ ಠಾಣೆ ಇನ್ಸ್ಪೆಕ್ಟರ್ ಗೆ ಸೂಚಿಸಿದ್ದರು. ಡ್ರಗ್ಸ್ ಪ್ರಕರಣದಲ್ಲಿ ವಶಕ್ಕೆ ಪಡೆದ ನಂತರ ಕಾನೂನು ರೀತಿ ಕ್ರಮ ಜರುಗಿಸಬೇಕಿತ್ತು. ಆದರೆ ಖಾಸಗಿ ವ್ಯಕ್ತಿಗಳೊಂದಿಗೆ ಸೇರಿ ಹಣ ಸುಲಿಗೆಗೆ ಯತ್ನಿಸಿದ್ದಾರೆ ಎಂಬುದು ಕಂಡು ಬಂದ ಹಿನ್ನೆಲೆಯಲ್ಲಿ ಪುನಿತ್ ಅಮಾನತು ಮಾಡಲಾಗಿದೆ. ಇಲಾಖಾ ಮಟ್ಟದ ವಿಚಾರಣೆಗೆ ಡಿಸಿಪಿ ಆದೇಶಿಸಿದ್ದಾರೆ.

