ದಾವಣಗೆರೆ:ಮಕ್ಕಳು ಕೇವಲ ಅಂಕಪಟ್ಟಿಗೆ, ಪಠ್ಯ ಪುಸ್ತಕಗಳಿಗೆ ಸೀಮಿತವಾಗದೇ ನಮ್ಮ ನಾಡು, ನುಡಿ, ಸಂಸ್ಕೃತಿ, ಸಂಸ್ಕಾರಗಳಿಗೆ ಆದ್ಯತೆ ನೀಡಬೇಕಾಗಿದೆ. ಶಿಕ್ಷಣದ ಜತೆಯಲ್ಲಿ ಜ್ಞಾನಾರ್ಚನೆಗಳಿಗೆ ತೊಡಗಿಸಿಕೊಂಡಾಗ ಮುಂದಿನ ಜೀವನಕ್ಕೆ ಸಾರ್ಥಕತೆ ಬರುತ್ತದೆ ಎಂದು ನಾಡಿನ ಖ್ಯಾತ ಹಿರಿಯ ಕವಿ, ಸಾಹಿತಿ ಬೆಂಗಳೂರಿನ ಬಿ.ಆರ್.ಲಕ್ಷ್ಮಣ್ ರಾವ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ದಾವಣಗೆರೆಯ ಗೌರಮ್ಮ ನರ ಹರಿಶೇಟ್ ಸಭಾ ಭವನದಲ್ಲಿ ನಿನ್ನೆ ತಾನೇ ಪ್ರೇಮಾ ಅರುಣಾಚಲ ಎನ್. ರೇವಣಕರ್ ಪ್ರತಿಷ್ಠಾನದಿಂದ ೨೦೨೩-೨೪ನೇ ಸಾಲಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ದೈವಜ್ಞ ಬ್ರಾಹ್ಮಣ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ “ಶಾರದಾ ಪುರಸ್ಕಾರ” ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಥಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ನಾಡಿನ ಖ್ಯಾತ ಹಿರಿಯ ಚುಟುಕು ಕವಿ ಬೆಂಗಳೂರಿನ ಹೆಚ್.ಡುಂಡಿರಾಜ್, ಮಾತನಾಡಿ, ಶಿಕ್ಷಣದ ಪರೀಕ್ಷೆಯಲ್ಲಿ ಶೇ.೯೦ಕ್ಕೆ ಸೀಮಿತವಾಗದೇ ಶೇ.೧೦೦ ಅಂಕ ಪಡೆಯುವುದು ಸರ್ವೆ ಸಾಮಾನ್ಯವಾಗಿದೆ. ಮಕ್ಕಳಲ್ಲಿ ಸಾಮಾನ್ಯ ಜ್ಞಾನದ ಕೊರತೆ ವಿಷಾದನೀಯ ಎಂದರು. ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ೧೨೫ ಪ್ರತಿಭಾವಂತ ಮಕ್ಕಳಿಗೆ ಪೂರ್ಣಕುಂಭ ಸ್ವಾಗತ, ಮಂಗಳವಾಧ್ಯದೊAದಿಗೆ ಮೆರವಣಿಗೆಯಲ್ಲಿ ಕರೆತಂದು ಕನ್ನಡ ಕಂಕಣಕಟ್ಟಿ, ಕನ್ನಡ ತಿಲಕವಿಟ್ಟು, ಪೋಷಕರೊಂದಿಗೆ ಕನ್ನಡಾರತಿ ಬೆಳಗಿ ವೇದಿಕೆಯ ಪ್ರತ್ಯೇಕವಾಗಿ ಭವ್ಯ ದಿವ್ಯ ವೇದಿಕೆಯ ಮಂಟಪದ ಸಿಂಹಾಸನದಲ್ಲಿ ಕೂರಿಸಿ ಪುಷ್ಪವೃಷ್ಟಿಯೊಂದಿಗೆ ಸನ್ಮಾನಿಸಿ, ಸಂಭ್ರಮದಿAದ “ಶಾರದಾ ಪುರಸ್ಕಾರ” ರಾಜ್ಯ ಪ್ರಶಸ್ತಿ ವಿತರಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಸಂಸ್ಥಾಪಕರಾದ ಡಾ. ನಲ್ಲೂರು ಅರುಣಾಚಲ ಎನ್.ರೇವಣಕರ್, ಮುಖ್ಯ ಅತಿಥಿಗಳಾಗಿ ವೆದಿಕೆಯಲ್ಲಿ ಉಪಸ್ಥಿತರಿದ್ದ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಮತಿ ಪ್ರೇಮಾ ಅರುಣಾಚಲ ಎನ್.ರೇವಣಕರ್, ದಾವಣಗೆರೆಯ ಸರಫ್ ಜ್ಯೂಯರ‍್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ನಲ್ಲೂರು ರಾಜ್‌ಕುಮಾರ್, ಬೆಳಗಾವಿಯ ದೈವಜ್ಞ ಸಮಾಜದ ಅಧ್ಯಕ್ಷರಾದ ದಯಾನಂದ ಜಿ.ನೇತಲ್‌ಕರ್ ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಶುಭ ಕೋರಿದರು.
ನಲ್ಲೂರು ಕುಟುಂಬದ ಸೊಸೆಯಂದಿರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭಕ್ಕೆ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಕವಿತಾ ಗುರುಪ್ರಸಾದ್ ವೆರ್ಣೇಕರ್ ಸ್ವಾಗತಿಸಿದರು. ನಿರ್ಮಲ ರಾಜೇಂದ್ರಬಾಬು ಅಚ್ಚುಕಟ್ಟಾಗಿ ನಿರೂಪಿಸಿರು. ಪ್ರತಿಷ್ಠಾನದ ಗೌರವ ಸಲಹೆಗಾರರಾದ ಸಾಲಿಗ್ರಾಮ ಗಣೇಶ್ ಶೆಣೈಯವರು ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳಿಗೆ ಪ್ರಮಾಣ ವಚನ ಬೋಧಿಸಿ ಕೊನೆಯಲ್ಲಿ ವಂದಿಸಿದರು.
ವಿದ್ಯಾ ಪರಮೇಶ್, ಸಾವಿತ್ರಿಯವರು ಮಕ್ಕಳ ಪಟ್ಟಿ ಓದಿದರು. ಪ್ರತಿಷ್ಠಾನದ ನಿರ್ದೇಶಕರಾದ ನಲ್ಲೂರು ಲಕ್ಷ್ಮಣ್ ರಾವ್, ಉಪಾಧ್ಯಕ್ಷರಾದ ಅನಿತಾ ರಾಜೇಶ್ ಪಾವಸ್ಕರ್, ಖಜಾಂಚಿ ಸೌಮ್ಯ ಸುಮಿತ್ ಅಣ್ವೇಕರ್ ದಂಪತಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.