ರಾಮಕೃಷ್ಣ ಮಠದಲ್ಲಿ ರಾಷ್ಟೀಯ ಯುವ ದಿನಾಚರಣೆ ಕಾರ್ಯಕ್ರಮ : 600 ಕ್ಕೂ ಹೆಚ್ಚು ಯುವಕರು ಭಾಗಿ
ಭಾರತದ ಇತಿಹಾಸ ಹಾಗೂ ಹಿರಿಮೆ ಗರಿಮೆಗಳನ್ನು ಸ್ವಾಮಿ ವಿವೇಕಾನಂದರು ಜಗತ್ತಿಗೆ ಎತ್ತಿ ತೋರಿಸಿದರು. ಇತಿಹಾಸಕಾರರು ವಿವೇಕಾನಂದರನ್ನು ಭಾರತದ ನವೋದಯದ ಅನರ್ಘ್ಯ ರತ್ನ ಎಂದು ಕರೆಯುತ್ತಾರೆ. ಸ್ವಾಮಿ ವಿವೇಕಾನಂದರು ವ್ಯಕ್ತಿತ್ವ ನಿರ್ಮಾಣ ಮಾಡುವ ಶಿಕ್ಷಣ ಅಗತ್ಯ ಎಂದು ಹೇಳುತ್ತಾರೆ. ಪರಿವ್ರಾಜಕ ಸನ್ಯಾಸಿಯಾಗಿ ಇಡೀ ದೇಶವನ್ನು ಅಲ್ಲದೆ ಇಡೀ ವಿಶ್ವವನ್ನು ಸಂಚರಿಸಿದ ಸ್ವಾಮಿ ವಿವೇಕಾನಂದರು ಸ್ವಯಂ ಪರಿವರ್ತನೆ ಹಾಗೂ ಸಮಾಜದ ಪರಿವರ್ತನೆಗಾಗಿ ಶ್ರಮಿಸಿದರು. ಅಷ್ಟೇ ಅಲ್ಲದೆ ರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ಮಿಷನ್ ಎಂಬ ಸಂಸ್ಥೆಗಳನ್ನು ಈ ಉದ್ದೇಶಕ್ಕಾಗಿ ಸ್ಥಾಪಿಸಿದರು. ನಮ್ಮ ವ್ಯಕ್ತಿತ್ವ ಪರಿವರ್ತನೆಯಾಗಿ ಪರಿಪೂರ್ಣವಾಗಲು ನಮ್ಮ ಜೀವನ ಅರ್ಥಪೂರ್ಣವಾಗಲು ಸ್ವಾಮಿ ವಿವೇಕಾನಂದರ ಬಗ್ಗೆ ಅಧ್ಯಯನ ಮಾಡಬೇಕು ಎಂದು ರಾಮಕೃಷ್ಣ ಮಠ, ಬೇಲೂರು ಮಠದ ವಿಶ್ವಸ್ಥರು ಹಾಗೂ ಮೈಸೂರಿನ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಮುಕ್ತಿದಾನಂದಜಿ ಹೇಳಿದರು. ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ನಡೆದ ರಾಷ್ಟ್ರಿಯ ಯುವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಕಾಪ್ಟನ್ ಬ್ರಿಜೇಶ್ ಚೌಟ ಅವರು ಮಾತನಾಡಿ ಸ್ವಾಮಿ ವಿವೇಕಾನಂದರ ಪರಿಕಲ್ಪನೆ ಹಾಗೂ ಅವರ ಚಿಂತನೆಗಳು ಇಂದು ಸಾಕಾರವಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಇಂದಿನ ಯುವಸಮೂಹ ತಮ್ಮ ಸಾಮರ್ಥ್ಯವನ್ನು ಅರಿತು ಎಚ್ಚೆತ್ತುಕೊಳ್ಳಬೇಕಾಗಿದೆ. ಭಾರತೀಯರು ಶೇಷ್ಠ ಸಾಂಸ್ಕೃತಿಕ ಹಿನ್ನೆಲೆಯ ವಾರೀಸುದಾರರು. ಅಷ್ಟೇ ಅಲ್ಲದೆ ಭಾರತದಲ್ಲಿ ಯುವಕರ ಸಂಖ್ಯೆ ಒಟ್ಟು ಜನಸಂಖ್ಯೆಯ ಅರ್ಧಕ್ಕಿಂತಲೂ ಹೆಚ್ಚು. ಈ ಯುವ ಸಮುದಾಯ ಗುರುತರವಾದ ಜವಾಬ್ದಾರಿಯನ್ನು ಅರಿತು ಮುನ್ನಡೆಯಬೇಕಾಗಿದೆ. ಇದಕ್ಕೆ ಸ್ವಾಮಿ ವಿವೇಕಾನಂದರಿಗಿಂತ ದೊಡ್ಡ ಪ್ರೇರಣೆ ಇನ್ನೊಬ್ಬರಿಲ್ಲ. ಈ ಹಿನ್ನೆಲೆಯಲ್ಲಿ ಅವರ ಅಧ್ಯಯನ ಮಾಡೋಣ ಹಾಗೂ ಅವರ ಸಂಸ್ಥೆಯಾದ ರಾಮಕೃಷ್ಣ ಮಿಷನ್ ನ್ನ ಚಟುವಟಿಕೆಗಲ್ಲಿ ತೊಡಗಿಸಿಕೊಳ್ಳೋಣ ಎಂದು ಅಭಿಪ್ರಾಯಪಟ್ಟರು.
ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ವಿಶೇಷ ಅವಧಿಗಳು ಹಾಗೂ ಸಂವಾದ ಕಾರ್ಯಕ್ರಮದ ಮೊದಲನೇ ಅವಧಿಯಲ್ಲಿ ಗದಗ ಮತ್ತು ವಿಜಯಪುರದ
ರಾಮಕೃಷ್ಣ – ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ನಿರ್ಭಯಾನಂದಜಿ ಅವರು ಆಂತರಿಕ ಸಾಮರ್ಥ್ಯವನ್ನು ಜಾಗೃತಗೊಳಿಸಲು ಯುವಕರಿಗೆ ಸ್ವಾಮಿ ವಿವೇಕಾನಂದರ ಸಂದೇಶ ಎಂಬ ವಿಷಯದ ಬಗ್ಗೆ ಮಾತನಾಡಿದರು. ಎರಡನೇ ಅವಧಿಯಲ್ಲಿ ಬೆಂಗಳೂರಿನ ಯೌತ್ ಫಾರ್ ಪರಿವರ್ತನ್ ನ ಸ್ಥಾಪಕರು ಹಾಗೂ
ಅಧ್ಯಕ್ಷರಾದ ಅಮಿತ್ ಅಮರ್ ನಾಥ್ ಅವರು ಸೇವೆಯ ಶಕ್ತಿ – ಯುವಕರು ಹೇಗೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂಬ ವಿಷಯದ ಬಗ್ಗೆ ವಿಚಾರ ಮಂಡಿಸಿದರು. ನಂತರ “ವ್ಯಕ್ತಿ, ಸೇವೆ ಮತ್ತು ಸ್ವಾಮಿ ವಿವೇಕಾನಂದ” ಎಂಬ ವಿಷಯದ ಕುರಿತು ನಡೆದ ಸಂವಾದ ನಡೆಯಿತು. ಈ ಸಂವಾದದಲ್ಲಿ ಗದಗ ಮತ್ತು ವಿಜಯಪುರದ ರಾಮಕೃಷ್ಣ – ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ನಿರ್ಭಯಾನಂದಜಿ, ಬೆಂಗಳೂರಿನ ಯೌತ್ ಫಾರ್ ಪರಿವರ್ತನ್ ನ ಸ್ಥಾಪಕಾಧ್ಯಕ್ಷರಾದ ಅಮಿತ್ ಅಮರ್ ನಾಥ್ ಹಾಗೂ ಮಂಗಳೂರಿನ ಅನಿರ್ವೇದ ರಿಸೋರ್ಸ್ ಸೆಂಟರ್ ನ ನಿರ್ದೇಶಕರಾದ ಡಾ. ಕೆ. ಟಿ. ಶ್ವೇತಾ ಅವರು ಭಾಗವಹಿಸಿದರು. ಮಂಗಳೂರು ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಕಾರ್ಯಕ್ರಮದ ಸಂಯೋಜಕರಾದ ಶ್ರೀ ರಂಜನ್ ಬೆಳ್ಳರ್ಪ್ಪಾಡಿ
ಅವರು ಸಂವಾದ ಕಾರ್ಯಕ್ರಮವನ್ನು ನಿರ್ವಹಿಸಿದರು.
ಈ ಕಾರ್ಯಕ್ರಮದಲ್ಲಿ ಮಂಗಳೂರಿನ ಜಿ.ಹೆಚ್.ಎಸ್. ರಸ್ತೆಯ ಶ್ರೀನಿವಾಸ ಕಾಲೇಜ್ ಆಫ್ ಏವಿಯೇಷನ್, ಕೊಡಿಯಾಲಬೈಲ್ ನ ಎಸ್. ಡಿ. ಎಮ್. ಸ್ನಾತಕೋತ್ತರ ಅಧ್ಯಯನ ಕೇಂದ್ರ, ಕೊಟ್ಟಾರ ಚೌಕಿಯ ಎ. ಜೆ. ತಾಂತ್ರಿಕ ಮಹಾವಿದ್ಯಾಲಯ, ಬೋಂದೆಲ್ ನ ಮನ್ನೇಲ್ ಶ್ರೀನಿವಾಸ್ ನಾಯಕ್ ವ್ಯವಹಾರ ಅಧ್ಯಯನ ಸಂಸ್ಥೆ, ನೀರುಮಾರ್ಗದ ಮಂಗಳಾ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್, ಹಂಪನಕಟ್ಟೆಯ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು, ಪಾಂಡೇಶ್ವರದ ಶ್ರೀನಿವಾಸ ವಿಶ್ವವಿದ್ಯಾನಿಲಯ, ವಳಚ್ಚಿಲ್ ನ ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯ, ಅಡ್ಯಾರ್ ನ ಸಹ್ಯಾದ್ರಿ ತಾಂತ್ರಿಕ ಮಹಾವಿದ್ಯಾಲಯ, ಪುತ್ತೂರಿನ ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯ, ಮೂಡಬಿದಿರೆಯ ಆಳ್ವಾಸ್ ಸ್ನಾತಕೋತ್ತರ ಅಧ್ಯಯನ ಕೇಂದ್ರ ಒಳಗೊಂಡAತೆ ವಿವಿಧ ಕಾಲೇಜುಗಳ 600 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಭಾರತೀಯ ಸೇನೆಯ ನಿವೃತ್ತ ಯೋಧರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ಅ ವರು ಈ ಸ್ವಾಗತಿಸಿ, ಮಂಗಳೂರು ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಕಾರ್ಯಕ್ರಮದ ಸಂಯೋಜಕರಾದ ಶ್ರೀ ರಂಜನ್ ಬೆಳ್ಳರ್ಪ್ಪಾಡಿ ವಂದಿಸಿದರು, ಉಪನ್ಯಾಸಕ ಸಂತೋಷ್ ಆಳ್ವ ಎಕ್ಕಾರು ಕಾರ್ಯಕ್ರಮ ನಿರ್ವಹಿಸಿದರು.
ಶ್ರೀ ಶಾರದಾದೇವಿ ಅಧ್ಯಯನ ಕೇಂದ್ರ ಉದ್ಘಾಟನೆ ಈ ಸಂದರ್ಭದಲ್ಲಿ ಶ್ರೀ ಶಾರದಾದೇವಿ ಅಧ್ಯಯನ ಕೇಂದ್ರ ಉದ್ಘಾಟನೆಯನ್ನು ರಾಮಕೃಷ್ಣ ಮಠ, ಬೇಲೂರು ಮಠದ ವಿಶ್ವಸ್ಥರು ಹಾಗೂ ಮೈಸೂರಿನ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಮುಕ್ತಿದಾನಂದಜಿ ನೆರವೇರಿಸಿದರು. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ವಿದ್ಯಾರ್ಥಿಗಳಿಗೆ ಈ ಕೇಂದ್ರದಲ್ಲಿ ಅಧ್ಯಯನ ನಡೆಸಲು ಅವಕಾಶ ಕಲ್ಪಿಸಲಾಗುವುದು.